ಜಿಲ್ಲೆ

ಪಟಾಕಿ ಅವಘಡದ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳಿ:ಎಎಸ್ಪಿ ವೆಂಕಟೇಶ್ ನಾಯ್ಡ

ಹಾಸನ: ಪಟಾಕಿಯಿಂದ ಉಂಟಾಗುವ ಅವಘಡದಿಂದ ಹೇಗೆ ರಕ್ಷಣೆ ಪಡೆಯಬೇಕು ಎಂಬುದನ್ನು ತಿಳಿಸಲು ವ್ಯಾಪಾರಸ್ಥರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ನಾಯ್ಡು ತಿಳಿಸಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸತ್ಯಕಾಂತ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀ ಹಾಸನಾಂಬ ಪಟಾಕಿ ವರ್ತಕರ ಸಂಘ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಗ್ನಿ ಶಮನ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪಟಾಕಿ ವ್ಯಾಪಾರ ಮಾಡುವವರಿಗೆ ಪೊಲೀಸ್ ಅಧಿಕಾರಿಗಳು ನಮಗೆ ಯಾವ ರೀತಿ ಸಹಕಾರ ಕೊಟ್ಟಿಲ್ಲ ಎನ್ನುವ ಮಾತು ಬರಬಾರದು ಎಂದು ಇಂತಹ ಜಾಗೃತಿ ಕಾರ್ಯಾಗಾರ ನಡೆಸಲಾಗುತ್ತಿದೆ. ನಿಮಗೆ ಶಾಶ್ವತವಾಗಿ ಪಟಾಕಿ ಮಾರಾಟದ ಒಂದು ಪ್ರಮಾಣಪತ್ರ ವಿತರಣೆ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಪಟಾಕಿ ವ್ಯಾಪಾರ ಮಾಡುವಾಗ ಸುರಕ್ಷತೆಗೆ ಹೆಚ್ಚು ಮಹತ್ವ ನೀಡಬೇಕು. ಪಟಾಕಿಯಿಂದ ಅನೇಕ ಅವಘಡಗಳು ಸಂಭವಿಸಿ ಪ್ರಾಣವೇ ಹೋಗಿವೆ. ಇದೊಂದು ರೀತಿ ಸ್ಪೋಟಕವೇ ಆಗಿದೆ. ಪಟಾಕಿ ಬಗ್ಗೆ ತಿಳಿವಳಿಕೆ ಬೇಕಾಗಿದೆ. ಪಟಾಕಿ ವ್ಯಾಪಾರ ಮಾಡುವಾಗ ಯಾರೋ ಒಬ್ಬರೂ ಬಿಡಿ, ಸಿಗರೇಟ್ ಸೇದಿ ಎಸೆದಾಗ ಆಗುವ ಅಪರಾಧದಲ್ಲಿ ನೀವು ಸೇರಬಹುದು. ಇದರಿಂದ ದೂರವಿರಲು ಮೊದಲೇ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಗ್ರೇಡ್-2 ತಹಸೀಲ್ದಾರ್ ರಮೇಶ್ ಮಾತನಾಡಿ, ಪಟಾಕಿ ಬಳಸುವಿಕೆ ಮತ್ತ ಮಾರಾಟದ ಬಗ್ಗೆ ಎಚ್ಚರವಹಿಸಬೇಕು. ಮಾರಾಟ ಮಾಡುವಾಗಲು ಸುರಕ್ಷತೆ ಅತ್ಯಗತ್ಯ. ಇದರ ಬಗ್ಗೆ ತಿಳಿಯಲು ಇಂತಹ ತರಬೇತಿ ಪ್ರಮುಖವಾಗಿದೆ. ಕೇವಲ ಲಾಭದ ದೃಷ್ಟಿಯಿಂದ ಪಟಾಕಿ ವ್ಯಾಪಾರ ಮಾಡಬೇಡಿ. ಇದರಿಂದ ಬಹಳಷ್ಟು ಅನಾಹುತ ಎದುರಾಗಲಿದೆ. ಯಾವುದೇ ರೀತಿಯಲ್ಲಿ ಅನಾಹುತಕ್ಕೆ ಅವಕಾಶ ಆಗದ ರೀತಿಯಲಿ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಅಗ್ನಿ ಶಮನ ದಳದ ಅಧಿಕಾರಿ ಕೆ.ಟಿ. ನವೀನ್ ಕುಮಾರ್ ಮಾತನಾಡಿ, ಪಟಾಕಿಯಿಂದ ಏನೇನು ತೊಂದರೆ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಮುನ್ನೆಚರಿಕ ಕ್ರಮ ಕೈಗೊಂಡು ಸಾವಿನ ಪ್ರಮಾಣ ಕಡಿಮೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಕಳೆದ ವರ್ಷ ಕೂಡ ತರಬೇತಿ ಕೊಡಲಾಗಿತ್ತು. ಆದರೆ ಯಾವ ಸರ್ಟಿಫಿಕೆಟ್ ನೀಡಿರಲಿಲ್ಲ. ಈ ವರ್ಷ ತರಬೇತಿ ಪಡೆದ ಎಲ್ಲರಿಗೂ ಸರ್ಟಿಫಿಕೆಟ್ ನೀಡುವಂತೆ ಜಿಲ್ಲಾಧಿಕಾರಿ ಸಭೆಯಲ್ಲಿ ಸೂಚಿಸಲಾಗಿದೆ. 2550 ರೂ. ಶುಲ್ಕವನ್ನು ಪಾವತಿಸಿ ಸರ್ಟಿಫಿಕೆಟ್ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಗಿಡ್ಡೇಗೌಡ, ಶಿರಸ್ತೆದಾರ ಯಶೋಧರ್, ಪಟಾಕಿ ವರ್ತಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.