ಹಾಸನ: ಸರ್ಕಾರದ ಆಸ್ತಿ ಆಗಿರುವ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಿಂದು ಸಂಘಟನೆಗೆ ಸೇರಿದ ಪಾಂಚಜನ್ಯ ಗಣಪತಿ ಪ್ರತಿಷ್ಠಾಪನೆ ಮತ್ತು ಹೋಮ ಹವನಕ್ಕೆ ಅವಕಾಶ ನೀಡಬಾರದು ಎಂಬುದಾಗಿ ಒತ್ತಾಯಿಸಿ ದಲಿತ ಮತ್ತು ಜನಪರ ಸಂಘಟನೆಗಳ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯು ಆ.31 ರಂದು ಪಾಂಚಜನ್ಯ ಹಿಂದೂ ಗಣಪತಿ ಪ್ರತಿಷ್ಠಾಪನೆ ಮಾಡಿ ಸೆ.5 ರವರೆಗೆ ಹೊಮ-ಹವನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಹಾಗೂ ಶೋಭಯಾತ್ರೆ ಹಮ್ಮಿಕೊಂಡಿದ್ದಾರೆ. ಇದು ಖಂಡನೀಯ ಮತ್ತು ಸಂವಿಧಾನದ ಮತಧರ್ಮ ನಿರಪೇಕ್ಷ ತತ್ವದ ಉಲ್ಲಂಘನೆ ಆಗಿದೆ ಎಂದು ಮನವಿಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಜಿಲ್ಲಾಡಳಿತವೇ ನಿರ್ದಿಷ್ಟವಾದ ಧರ್ಮದ ಓಲೈಕೆಗೆ ನಿಂತರೆ ಸಮಾಜದಲ್ಲಿ ಜಾತ್ಯತೀತ ವಾತಾವರಣ ಹಾಳಾಗಿ ಧಾರ್ಮಿಕ ಅಶಾಂತಿ ಸೃಷ್ಟಿಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹಾಸನಾಂಬ ಕಲಾಕ್ಷೇತ್ರದಲ್ಲಿ ಗಣಪತಿ ಪ್ರತಿಷ್ಠಾಪನೆ ಮತ್ತು ಹೋಮ ಹವನಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ದಸಂಸ ಮುಖಂಡ ಎಸ್.ಎನ್. ಮಲ್ಲಪ್ಪ, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ವಂದೇ ಮಾತರಂ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಧರ್ಮರಾಜ್ ಕಡಗ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್, ಡಾ. ಬಾಬು ಜಗಜೀವನ್‌ರಾಮ್ ಮಾದಿಗ ಮಹಾಸಭಾದ ಎಚ್.ಪಿ. ಶಂಕರರಾಜು ಇದ್ದರು.