ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲಾ ಕೇಂದ್ರದಲ್ಲಿ ಚಿಕ್ಕಬಳ್ಳಾಪುರ ಉತ್ಸವ ವೇದಿಕೆ ಕಾರ್ಯಕ್ರಮ ನಡೆಯುವ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣಕ್ಕೆ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಡಾ ಕೆ.ಸುಧಾಕರ್ ಫೌಂಡೇಷನ್ ಸಹಯೋಗದೊಂದಿಗೆ ಸ್ಪರ್ಧೆಗಳು, ಸಾಂಸ್ಕೃತಿಕ ಚಟುವಟಿಕೆ, ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ 2023 ರ ಜ.7ರಿಂದ ಜ.14ರವರೆಗೆ 7 ದಿನಗಳ ಕಾಲ ಉತ್ಸವವು ನಡೆಯಲಿದೆ. ಈಗಾಗಲೇ ಪೂರ್ವಭಾವಿ ಸಭೆಗಳಲ್ಲಿ ವಿವಿಧ ಸಮಿತಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಇದರ ನಡುವೆ ಸಚಿವರು ಅಧಿಕಾರಿಗಳೊಂದಿಗೆ ನಗರದಲ್ಲಿನ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ, ಸಂಬಂಧಪಟ್ಟವರಿಗೆ ಸಲಹೆ ಸೂಚನೆ ನೀಡಿದರು.
ಉತ್ಸವದ ಪ್ರಮುಖ ವೇದಿಕೆ ನಿರ್ಮಾಣ, ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ನಿಗದಿತ ಸ್ಥಳ, ಒಳಾಂಗಣ ಕ್ರೀಡಾಂಗಣದ ಸ್ಥಳಗಳನ್ನು ವೀಕ್ಷಿಸಿದರು.
ಮೈಸೂರು ದಸರಾ, ಹಂಪಿ ಹಾಗೂ ಕಾರ್ಕಳದ ಉತ್ಸವದ ಮಾದರಿಯಲ್ಲಿ ಚಿಕ್ಕಬಳ್ಳಾಪುರದ ಉತ್ಸವವು ಪಕ್ಷಾತೀತವಾಗಿ 7 ದಿನ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಪೂರೈಸುತ್ತಿದೆ. 20 ವರ್ಷಗಳ ಬಳಿಕ ಜಿಲ್ಲೆಯ ಎಲ್ಲ ಕೆರೆಗಳೂ ತುಂಬಿ ಕೋಡಿ ಹರಿದಿವೆ. ಇಂತಹ ಸಂದರ್ಭದಲ್ಲಿ ಪ್ರತಿ ಗ್ರಾಮದಲ್ಲಿಯೂ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ. ಜಿಲ್ಲೆಗೆ ಎಚ್‌ಎನ್ ವ್ಯಾಲಿ ಯೋಜನೆ ಅನುಷ್ಠಾನಗೊಂಡು ಕೆರೆಗಳು ತುಂಬಿದ ಹಿನ್ನೆಲೆಯಲ್ಲಿ ಜಲಜಾತ್ರೆ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಮೈಸೂರು ದಸರಾ ನೆನಪಿಸುವ ಮಾದರಿಯಲ್ಲಿ ದೀಪಾಲಂಕಾರ, ತೋಟಗಾರಿಕಾ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ, ಊರ ಹಬ್ಬ, ಕ್ರೀಡೋತ್ಸವ, ರಂಗೋಲೆ, ಗಾಳಿಪಟ ಸ್ಪರ್ಧೆ, ಫುಡ್ ಸ್ಟ್ರೀಟ್, ಸೇರಿದಂತೆ 7 ದಿನಗಳ ಆಕರ್ಷಕ ಚಟುವಟಿಕೆಯು ಸಂಭ್ರಮವನ್ನು ಹೆಚ್ಚಿಸಲಿದ್ದು, ಈಗಾಗಲೇ ಉತ್ಸವದ ಲೋಗೋ ಬಿಡುಗಡೆಗೊಳಿಸಲಾಗಿದೆ ಎಂದರು.
ಅದ್ದೂರಿ ಕಾರ್ಯಕ್ರಮಕ್ಕೆ ಸುಸಜ್ಜಿತ ವೇದಿಕೆಗಳು ನಿರ್ಮಾಣವಾಗಬೇಕು. ನಿಗದಿತ ಸ್ಥಳದಲ್ಲಿ ವಾಹನ ಸಂಚಾರ ಮತ್ತು ವಾಹನ ನಿಲುಗಡೆಗೆ ಯೋಜನೆ ರೂಪಿಸಿ, ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಸರ್ ಎಂ.ವಿ. ಒಳಾಂಗಣ ಕ್ರೀಡಾಂಗಣಕ್ಕೆ ತುರ್ತಾಗಿ ಸಿಂಥೆಟಿಕ್ ಮ್ಯಾಟ್ ಅಳವಡಿಸಬೇಕು. ಇದರ ಮೇಲೆ ಕ್ರೀಡಾ ಸ್ಪರ್ಧೆಗಳು ನಡೆಯುವಂತಾಗಬೇಕು. ಇನ್ನು ಆಸಕ್ತಿದಾಯಕ ಕ್ರೀಡೆಗಳಲ್ಲಿ ಸ್ವಯಂ ನಾನು ಸಹ ಭಾಗವಹಿಸುತ್ತೇನೆ ಎಂದರು.
ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಉಪವಿಭಾಗಾಧಿಕಾರಿ ಡಾ. ಸಂತೋಷ್ ಕುಮಾರ್ ಮತ್ತಿತರರು ಇದ್ದರು.
ಜನಾರ್ದನರೆಡ್ಡಿ ಏಕೆ ಪಕ್ಷ ಕಟ್ಟಿದ್ರೋ ಗೊತ್ತಾಗುತ್ತಿಲ್ಲ
ಹೊಸ ಪಕ್ಷ ಕಟ್ಟುವ ಆಲೋಚನೆಯು ಮಾಜಿ ಸಚಿವ ಜನಾರ್ದನರೆಡ್ಡಿಗೆ ಏಕೆ ಬಂತು ಎಂಬುದು ಗೊತ್ತಾಗುತ್ತಿಲ್ಲ. ಈಗಲಾದರೂ ಬಿಜೆಪಿಯಲ್ಲಿ ಉಳಿದುಕೊಂಡು ಹೊಸ ಪಕ್ಷ ಸಂಘಟನೆಯ ನಿರ್ಧಾರ ಹಿಂಪಡೆಯಬೇಕು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವರು ಹೊಸ ರಾಜಕೀಯ ಪಕ್ಷ ಹುಟ್ಟು ಹಾಕಿರುವುದು ಅನಿರೀಕ್ಷಿತ ಬೆಳವಣಿಗೆ. ಇತ್ತೀಚೆಗೆ ಬಳ್ಳಾರಿಯಲ್ಲಿ ಭೇಟಿ ಮಾಡಿ ಚರ್ಚಿಸಿದ ಸಂದರ್ಭದಲ್ಲಿ ಅವರು ಕೆಲ ವಿಷಯಗಳನ್ನು ಹಂಚಿಕೊಂಡಿದ್ದು, ಮುಖ್ಯಮಂತ್ರಿ ಮತ್ತು ಪಕ್ಷದ ಉನ್ನತ ಮಟ್ಟದ ನಾಯಕರ ಗಮನಕ್ಕೆ ತರಲಾಗಿದೆ ಎಂದರು.
ಜನಾರ್ದನರೆಡ್ಡಿ ಬಿಜೆಪಿ ಸಂಘಟನೆಗೆ ಕಷ್ಟಪಟ್ಟಿದ್ದಾರೆ. ಇದಕ್ಕೆ ವರಿಷ್ಠರು ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ನಿವಾರಿಸಬಹುದು. ಇದರ ಬಗ್ಗೆ ಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದರು. ಹಿಂದೆ ಸಚಿವ ಶ್ರೀರಾಮುಲು ಪಕ್ಷ ಕಟ್ಟಿದ್ದರು. ಆದರೆ, ಅದು ಏನಾಯಿತು ಎಂಬುದರ ಅರಿವು ಅವರಿಗಿದೆ. ಪ್ರಾದೇಶಿಕ ಪಕ್ಷಗಳನ್ನು ಹುಟ್ಟು ಹಾಕುವುದು, ಯಶಸ್ವಿಯಾಗುವುದು ಬಹಳ ಕಷ್ಟದ ಕೆಲಸ. ಇದಕ್ಕೆ ಮಾಜಿ ಸಚಿವ ಜನಾರ್ದನರೆಡ್ಡಿ ಬಿಜೆಪಿಯಲ್ಲಿಯೇ ಇರಬೇಕು. ನಾವೆಲ್ಲರೂ ಸೇರಿಕೊಂಡು ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ ಎಂದರು.