ಜಿಲ್ಲೆ

ಪಕ್ಷದೊಳಗಿಲ್ಲ ನವೆಂಬರ್ ಕ್ರಾಂತಿಯ ಚರ್ಚೆ: ತನ್ವೀರ್ ಸೇಠ್

ಮೈಸೂರು: ನವೆಂಬರ್ ಕ್ರಾಂತಿಯ ಬಗ್ಗೆ ಸುಮ್ಮನೆ ಚರ್ಚೆಗಳು ನಡೆಯುತ್ತಿವೆ. ಆದರೆ, ನಮ್ಮ ಪಕ್ಷದೊಳಗೆ ಈ ಕುರಿತು ಯಾವ ಚರ್ಚೆಯೂ ನಡೆಯುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ತನ್ವೀರ್ ಸೇಠ್ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಬಗ್ಗೆ ಮಾತ್ರ ಪಕ್ಷದೊಳಗಡೆ ಚಿಂತನೆ ನಡೆದಿದೆ. ಈ ತಿಂಗಳ ಅಂತ್ಯದಲ್ಲಿ ಇದು ಆಗಬಹುದು. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದರು.

ಸಿಎಂ ಸ್ಥಾನದ ಬಗ್ಗೆ, ಮುಂದಿನ ನಾಯಕತ್ವದ ಬಗ್ಗೆ ಯಾರು ಏನೇ ಮಾತನಾಡಿದರೂ ಅದು ಅವರ ವೈಯಕ್ತಿಕ ಹೇಳಿಕೆ. ನಾಯಕತ್ವ ಬದಲಾವಣೆ ಬಗೆಗಿನ ಮಾತುಕತೆ ವಿಚಾರವನ್ನು ಹೈಕಮಾಂಡ್ ಶಾಸಕರಿಗೆ ಹೇಳಿಲ್ಲ.

ಯಾರೂ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬಾರದೆಂದು ಅದು ಸ್ಪಷ್ಟವಾಗಿ ಹೇಳಿದೆ. ಶಾಸಕರ ಬೆಂಬಲ ಯಾರಿಗಾದರೂ ಇರಬಹುದು. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.

ಕೆಲವರು ದಲಿತ ಸಿಎಂ ಬಗ್ಗೆ ಮಾತನಾಡುತ್ತಾರೆ. ಕೆಲವರು ಮತ್ತೊಬ್ಬರ ಹೆಸರು ಮಾತನಾಡುತ್ತಾರೆ. ಅದು ಅವರ ಅಭಿಪ್ರಾಯ ಅಷ್ಟೆ. ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯೂ ಅದು ಅವರ ವೈಯಕ್ತಿಕವಾದ ಹೇಳಿಕೆಯಾಗಿದೆ ಎಂದರು.

ಧರ್ಮಸ್ಥಳ ಪ್ರಕರಣವನ್ನು ವಾಪಸ್ ಪಡೆದವರ ಮೇಲೆ ತನಿಖೆಯಾಗಬೇಕು. ಯಾವ ಉದ್ದೇಶಕ್ಕಾಗಿ ಕೇಸ್ ಕೊಟ್ಟರು? ಈಗ ಯಾವ ಉದ್ದೇಶಕ್ಕಾಗಿ ಕೇಸ್ ವಾಪಸ್ ತೆಗೆದುಕೊಳ್ಳುತ್ತಿದ್ದಾರೆ? ಅವರ ಉದ್ದೇಶ ಏನು? ಅವರಿಗೆ ಯಾರು ಫಂಡ್ ಮಾಡಿದ್ದಾರೆ? ಇವೆಲ್ಲ ಸತ್ಯ ಹೊರಬರಬೇಕಿದೆ.

ಸುಮ್ಮನೆ ಧರ್ಮಸ್ಥಳದ ಮೇಲೆ ಆರೋಪ ಮಾಡಿದರನ್ನು ಸುಮ್ಮನೆ ಬಿಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಧಾರ್ಮಿಕ ನಂಬಿಕೆಯ ಪ್ರಶ್ನೆ. ಹೀಗಾಗಿ ಅವರ ಮೇಲೆ ತನಿಖೆಯಾಗಲಿ ಎಂದು ಆಗ್ರಹಿಸಿದರು.