ಅರಸೀಕೆರೆ: ಪಕ್ಷ ಸಂಘಟನೆ ದೃಷ್ಟಿಯಿಂದ ಶೀಘ್ರದಲ್ಲಿ ಕ್ಷೇತ್ರ ಪ್ರವಾಸ ನಡೆಸಲಾಗುವುದು ಎಂದು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ಹಾಸನದಿಂದ ಕಡೂರಿಗೆ ತೆರಳುವ ಮುನ್ನ ನಗರದಲ್ಲಿ ಮಂಗಳವಾರ ತಾಲೂಕು ಕಚೇರಿ ಬಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕ್ಷೇತ್ರದ ಸ್ಥಿತಿಗತಿ ಕುರಿತು ವಿಚಾರ ವಿನಿಮಯ ಮಾಡಿಕೊಂಡು ಮಾತನಾಡಿದರು.
ಸಂಸದರ ಅನುದಾನದ ಅಡಿಯಲ್ಲಿ ಕುಡಿಯುವ ನೀರು, ಬಸ್ ಶೆಲ್ಟರ್ ನಿರ್ಮಾಣ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ವಿಧಾನಸಭಾ ಚುನಾವಣೆಯ ಸೋಲಿನಿಂದ ಯಾರೊಬ್ಬರೂ ಹತಾಶರಾಗುವ ಅಗತ್ಯವಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಪಡೆಯಿದ್ದು ಎಲ್ಲರೊಂದಿಗೆ ಚರ್ಚಿಸಿ ಬಾಣಾವರ, ಕಣಕಟ್ಟೆ ಸೇರಿ ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಪ್ರವಾಸ ನಡೆಸಿ ಅನುದಾನ ಹಂಚಿಕೆಯ ಜತೆಗೆ, ಕಾರ್ಯಕರ್ತರಿಗೆ ಶಕ್ತಿ ತುಂಬಲಾಗುವುದು ಎಂದು ಭರವಸೆ ನೀಡಿದರು.
ಯಾವುದೇ ಸಂದರ್ಭದಲ್ಲಾದರೂ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಅನುದಾನ ನೀಡುವ ಮೂಲಕ ಜೆಡಿಎಸ್ ಮುಖಂಡರಿಗೆ ಬಲ ನೀಡಬೇಕು ಎಂದು ನೊಳಂಬ ವೀರಶೈವ ಲಿಂಗಾಯಿತ ಸಮಾಜದ ಮುಖಂಡ ಭೈರಗೊಂಡನಹಳ್ಳಿ ನಿರಂಜನ್ ಮನವಿ ಮಾಡಿದರು. ಮಾಜಿ ಸೈನಿಕರ ಸಂಘದ ತಾಲೂಕು ಕಾರ್ಯದರ್ಶಿ ಹಬ್ಬನಘಟ್ಟ ನವೀನ್, ರಘು,ಮಂಜುನಾಥ್ ಇತರರು ಹಾಜರಿದ್ದರು.