ಜಿಲ್ಲೆ

ಪಕ್ಷ ಸಂಘಟನೆ ಅಖಾಡಕ್ಕಿಳಿದ ರೇವಣ್ಣ: ರಾಜಕೀಯ ವಲಯದಲ್ಲಿ ಭಾರಿ ಸಂಚಲನ

ಅರಸೀಕೆರೆ: ಪಕ್ಷ ಸಂಘಟನೆ ಬಲಗೊಳಿಸುವ ಜತೆಗೆ ಜೆಡಿಎಸ್ ತೊರೆಯಲು ಹೊರಟಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನು ರಾಜಕೀಯವಾಗಿ ಹಣಿಯಲು ಜಿಲ್ಲೆಯ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮತ್ತು ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಖುದ್ದು ಅಖಾಡಕ್ಕಿಳಿದಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.


ಕೆಲ ದಿನಗಳ ಹಿಂದೆಯಷ್ಟೇ ತಾಲೂಕಿನ ಕಣಕಟ್ಟೆ ಹೋಬಳಿ ವ್ಯಾಪ್ತಿಯ ಹರಳಕಟ್ಟ ಶಾಖಾಮಠ, ಡಿ.ಎಂ.ಕುರ್ಕೆ ವಿರಕ್ತಮಠ ಹಾಗೂ ಮಾಡಾಳು ನಿರಂಜನ ಪೀಠಕ್ಕೆ ಎಚ್.ಡಿ. ರೇವಣ್ಣ ಅವರು ಪಕ್ಷದ ಮುಖಂಡರ ಜತೆ ದಿಢೀರ್ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತರಹವೇರಿ ಚರ್ಚೆಗೆ ಗ್ರಾಸವಾಗಿದೆ. ವಿಧಾನ ಪರಿಷತ್ ಚುನಾವಣೆ ಗೆಲುವಿನ ಬಳಿಕ ಅಷ್ಟಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಡಾ. ಸೂರಜ್ ರೇವಣ್ಣ ವಾರಾಂತ್ಯದ ವೇಳೆಗೆ ಎರಡೆರಡು ಬಾರಿ ಅರಸೀಕೆರೆಗೆ ದೌಡಾಯಿಸಿ ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜತೆ ಹಲವು ಸುತ್ತಿನ ಮಾತುಕತೆ ನಡೆಸುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದರಿಂದಾಗಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಮತ್ತಷ್ಟು ರಂಗೇರುತ್ತಿದ್ದು ಶಾಸಕ ಕೆ.ಎಂ. ಶಿವಲಿಂಗೇಗೌರನ್ನು ಅಕ್ಷರಶಃ ನಿದ್ದೆಗೆಡಿಸಿದೆ.

ಚುನಾವಣೆ ಹೊಸ್ತಿಲಿನಲ್ಲಿ ತಾಲೂಕಿನ ದೇಗುಲ, ಮಂದಿರ, ಮಸೀದಿ, ಚರ್ಚ್, ಮಠ ಮಾನ್ಯಗಳಿಗೆ ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಭೇಟಿ ಸರಣಿ ಮುಂದುವರಿದಿದೆ. ತಮ್ಮ ಕೋಟಾದ ಅಡಿಯಲ್ಲಿ ಬರುವ ಅನುದಾನವನ್ನು ಸುಮುದಾಯ ಭವನ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೀಡುವುದಾಗಿ ಪ್ರಜ್ವಲ್ ಮತ್ತು ಸೂರಜ್ ಇಬ್ಬರೂ ವಾಗ್ದಾನ ನೀಡುತ್ತಿರುವುದು ಶಿವಲಿಂಗೇಗೌಡರ ಜೊತೆ ಕಾರ್ಯಕರ್ತರು ಹೋಗದಂತೆ ತಡೆಯುವ ಯತ್ನವಾಗಿದೆ ಎನ್ನುವ ಮಾತುಗಳು ಜೆಡಿಎಸ್ ಪಾಳೆಯದಲ್ಲಿ ಚಾಲ್ತಿಯಲ್ಲಿವೆ. ಬಾಣಾವರ ಹಾಗೂ ಅರಸೀಕೆರೆ ನಗರದ ಮಸೀದಿಗಳ ಅಭಿವೃದ್ಧಿಗೆ ಸಂಸದರ ನಿಧಿಯಿಂದ ನೆರವು ನೀಡುವುದಾಗಿ ಕೆಲ ತಿಂಗಳ ಹಿಂದೆಯಷ್ಟೇ ಸಂಸದ ಪ್ರಜ್ವಲ್ ರೇವಣ್ಣ ಬಹಿರಂಗವಾಗಿ ಘೋಷಿಸಿದ್ದರು. ಕ್ಷೇತ್ರದ ರಾಜಕೀಯ ಲೆಕ್ಕಾಚಾರವನ್ನು ಬುಡಮೇಲು ಮಾಡಲು ಹೊರಟಿರುವ ಎಚ್.ಡಿ. ರೇವಣ್ಣ ಎಲ್ಲ ಮಠಗಳ ಅಭಿವೃದ್ಧಿ ಕೆಲಸಗಳಿಗೆ ಮೊದಲ ಹಂತದಲ್ಲಿ ತಲಾ ಐದು ಲಕ್ಷ ರೂ. ನೀಡುವುದಾಗಿ ಹೇಳಿರುವುದು ರಾಜಕೀಯ ಗುಣಕಾರಕ್ಕೆ ಮುನ್ನುಡಿ ಬರೆದಿದೆ.

ಸತತ ಮೂರು ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದ ಶಿವಲಿಂಗೇಗೌಡ ಕಳೆದ ಹದಿನೈದು ವರ್ಷಗಳಿಂದ ಎಚ್.ಡಿ. ರೇವಣ್ಣ ಸೇರಿ ಜೆಡಿಎಸ್‌ನ ಯಾವುದೇ ಮುಖಂಡರು ಕ್ಷೇತ್ರಕ್ಕೆ ಪದೇ ಪದೆ ಬಾರದಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದು ಜಾಣ್ಮೆಯ ರಾಜಕಾರಣ ಮಾಡಿದ್ದರು. ಆ ಮೂಲಕ ಕ್ಷೇತ್ರದಲ್ಲಿ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಪಕ್ಷದ ಹಿಡಿತ ಕೈತಪ್ಪಲಿದೆ ಎನ್ನುವದನ್ನು ಅರಿತ ಎಚ್.ಡಿ. ರೇವಣ್ಣ ಹಾಗೂ ಡಾ. ಸೂರಜ್ ರೇವಣ್ಣ ಈಗ ಸಂಘಟನೆ ಹೊಣೆಗಾರಿಕೆ ಹೊರುವ ಮುನ್ಸೂಚನೆ ನೀಡಿದ್ದು ಶಿವಲಿಂಗೇಗೌಡ ಕುರಿತು ಅಸಮಾಧಾನ ಹೊಂದಿರುವ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಜೋಷ್ ಹೆಚ್ಚಿಸಿದೆ. ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವ ಸೃಷ್ಟಿಸುವ ಜತೆಗೆ ಕೆಎಂಶಿಗೆ ತಕ್ಕಪಾಠ ಕಲಿಸಲು ರಣತಂತ್ರ ಹೆಣೆದಿದ್ದು ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರುವಂತೆ ಮಾಡಿದೆ.

ನಗರಸಭೆಯಲ್ಲಿ 16 ಜೆಡಿಎಸ್ ಸದಸ್ಯರಿದ್ದು ಎಲ್ಲರ ವಿಶ್ವಾಸಗಳಿಸುವ ತಂತ್ರಗಾರಿಕೆಗೆ ಡಾ.ಸೂರಜ್ ರೇವಣ್ಣ ಮುಂದಾಗಿದ್ದು ಈಗಾಗಲೇ ನಗರದ ಪ್ರವಾಸಿ ಮಂದಿರದಲ್ಲಿ ಗೌಪ್ಯಸಭೆ ನಡೆಸಿ ಹೋಗಿದ್ದಾರೆ. ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷರೊಬ್ಬರ ಕಿರುಕುಳದಿಂದ ಬಂಡಾಯವೆದ್ದು ಪ್ರತ್ಯೇಕ ಆಸನ ಕೋರಿ ಜೆಡಿಎಸ್‌ನಿಂದ ಹೊರಹೋಗಿರುವ ಬಿ.ಎನ್. ವಿದ್ಯಾಧರ್, ಆಯೇಷಾ ಸಿಕಂದರ್, ಹರ್ಷವರ್ಧನ್, ದರ್ಶನ್‌ದಾಸ, ಕವಿತಾ ರಾಘವೇಂದ್ರ, ಚಂದ್ರಶೇಖರ್ ಮತ್ತು ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಅವರನ್ನೂ ಪಕ್ಷದಲ್ಲೇ ಉಳಿಸಿಕೊಳ್ಳಲು ಅವರ ಮನವೊಲಿಸುವ ಕೆಲಸ ಮಾಡಿದ್ದು, ಈ ಸಂಬಂಧ ಮೊದಲ ಸುತ್ತಿನ ಮಾತುಕತೆಯಲ್ಲಿ ಈ ಐವರು ಸದಸ್ಯರು ಡಾ.ಸೂರಜ್ ರೇವಣ್ಣ ಜತೆ ಕಾಣಿಸಿಕೊಳ್ಳವ ಮೂಲಕ ಜೆಡಿಎಸ್‌ಗೆ ಜೈ ಎಂದಿದ್ದು ತಂತ್ರಗಾರಿಕೆ ಫಲ ನೀಡುವ ಸಾಧ್ಯತೆಯಿದೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಶಾಸಕ ಎಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕ್ಷೇತ್ರ ಪ್ರವಾಸ ಕೈಗೊಂಡಲ್ಲಿ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಫೆ.12 ರಂದು ನಗರದಲ್ಲಿ ಆಯೋಜನೆಗೊಂಡಿರುವ ಜೆಡಿಎಸ್ ಕಾರ್ಯಕರ್ತರ ಸಭೆಯ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ.

‘‘ಪಕ್ಷದ ವರಿಷ್ಠರೂ ಒಳಗೊಂಡಂತೆ ಎಲ್ಲರೂ ಮನವೊಲಿಸುವ ಕೆಲಸ ಮಾಡಿದ್ದೇವೆ. ರಾಜಕೀಯ ಸ್ಥಾನಮಾನ, ಅಧಿಕಾರ ನೀಡಿದ ಪಕ್ಷದಲ್ಲಿ ಉಳಿಯುವುದು, ಬಿಡುವುದು ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಸೇರಿದ್ದಾಗಿದೆ. ಕಾರ್ಯಕರ್ತರ ಪರಿಶ್ರಮದಿಂದ ಕಟ್ಟಿದ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಬೂತ್ ಮಟ್ಟದಿಂದ ಜೆಡಿಎಸ್ ಬಲಗೊಳಿಸಲು ಅರಸೀಕೆರೆ ಕ್ಷೇತ್ರ ಸೇರಿ ಜಿಲ್ಲಾದ್ಯಂತ ಪ್ರವಾಸ ಮಾಡುತ್ತಿದ್ದೇನೆ.’’

ಡಾ.ಸೂರಜ್ ರೇವಣ್ಣ, ವಿಧಾನಪರಿಷತ್ ಸದಸ್ಯ.

‘‘ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಮತ್ತವರ ಬೆಂಬಲಿಗನೊಬ್ಬನ ಕಿರುಕುಳದಿಂದ ನಗರಸಭೆಯಲ್ಲಿ ಪ್ರತ್ಯೇಕ ಆಸನ ಕೋರಿದ್ದು ನಿಜ. ಪ್ರಕರಣ ಸದ್ಯ ಹೈಕೋರ್ಟ್‌ನಲ್ಲಿದ್ದು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹಳೆಯದನ್ನು ಮರೆತು ಒಗ್ಗೂಡಿ ಕೆಲಸ ಮಾಡುವಂತೆ ಕೇಳಿದ್ದಾರೆ. ದ್ವೇಷದ ರಾಜಕಾರಣಕ್ಕೆ ಇತಿಶ್ರೀ ಹಾಡುವ ಸಮಯ ಹತ್ತಿರವಾಗಿದ್ದು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ.’’

ಹರ್ಷವರ್ಧನ್ ರಾಜ್, ಜೆಡಿಎಸ್ ಮುಖಂಡ.