ಜಿಲ್ಲೆ

ಪಕ್ಷ ಬಯಸಿದರೆ ತಾವು ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ಧ:ಎಚ್.ಡಿ. ರೇವಣ್ಣ

ಹಾಸನ: ಯಾವುದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಮಾಡುತ್ತದೆ. ಪಕ್ಷ ಬಯಸಿದರೆ ತಾವು ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ಧವಿರುವುದಾಗಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಹೇಳಿದರು.


ನಗರದ ಸಂಸದರ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ರೇವಣ್ಣ ಅವರನ್ನು, ತಮ್ಮ ವಿರುದ್ಧ ಸ್ಪರ್ಧಿಸುವಂತೆ ರೇವಣ್ಣನವರಿಗೆ ಹಾಸನದ ಬಿಜೆಪಿ ಶಾಸಕ ಪ್ರೀತಮ್ ಗೌಡ ನೀಡಿರುವ ಪಂಥಾಹ್ವಾನವನ್ನು ಸ್ವೀಕರಿಸಿರುವುದಾಗಿ ಸಂಸದ ಪ್ವಜಲ್ ರೇವಣ್ಣ ನೀಡಿರುವ ಹೇಳಿಕೆ ಕುರಿತು ಗಮನ ಸೆಳೆದಾಗ ಮೇಲಿನಂತೆ ಪ್ರತಿಕ್ರಿಯಿಸಿದರು.


ಪಕ್ಷ ಎಲ್ಲಿ ಸ್ಪರ್ಧಿಸಲು ತಿಳಿಸುತ್ತದೆ ಅಲ್ಲಿ ನಾನು ಸ್ಪರ್ಧಿಸುತ್ತೇನೆ, ನನಗೆ ಯಾರ ಭಯವೂ ಇಲ್ಲ. ಜಿಲ್ಲೆಯಲ್ಲಿ ಈ ಬಾರಿ ಏಳಕ್ಕೆ ಏಳು ಕ್ಷೇತ್ರಗಳು ಜೆಡಿಎಸ್ ಪಾಲಾಗಲಿವೆ. ಅದಕ್ಕೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ ಎಂದರು.


ನಮ್ಮದು ಪ್ರಾದೇಶಿಕ ಪಕ್ಷ, ನಾವು ಎಲ್ಲದಕ್ಕೂ ಸಿದ್ಧ. 60 ವರ್ಷಗಳ ಕಾಲ ದೇವೇಗೌಡರನ್ನು ಈ ಜಿಲ್ಲೆ ರಾಜಕೀಯವಾಗಿ ಬೆಳೆಸಿದೆ. ಜಿಲ್ಲೆಯ ಜನರ ಸಮ್ಮುಖದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಫೆ.12 ರಂದು ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಜಿಲ್ಲೆಗೆ ಆಗಮಿಸಲಿದ್ದು, ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.


ಭವಾನಿ ರೇವಣ್ಣ ಅವರಿಗೆ ಪಕ್ಷದ ಟಿಕೆಟ್ ಕೊಡಬೇಕೋ, ಬೇಡವೋ, ಕೊಟ್ಟರೆ ಯಾವ ಕ್ಷೇತ್ರದಲ್ಲಿ ಅಭ್ಯರ್ಥಿ ಮಾಡಬೇಕು ಎಂಬುದನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಸಂಸದ ಡಿ.ಕೆ. ಸುರೇಶ್ ದೊಡ್ಡವರು, ಅವರು 60 ವರ್ಷಗಳ ಹಳೆಯ ಬಸ್ ರೆಡಿ ಮಾಡಿಕೊಂಡು ಬಂದಿದ್ದಾರೆ. ಅವರ ಬಗ್ಗೆ ಮಾತಾಡುವಷ್ಟು ಶಕ್ತಿ ನಮಗೆ ಇಲ್ಲ. ಕಾಲ ಬರುತ್ತದೆ ಆಗ ಉತ್ತರ ನೀಡುತ್ತೇನೆ. ಭಗವಂತ ಅವರಿಗೆ ಒಳ್ಳೆಯದು ಮಾಡಲಿ ಎಂದು ಹೊಳೆನರಸೀಪುರದಲ್ಲಿ ಬುಧವಾರ ಆಗಿರುವ ಬೆಳವಣಿಗೆ ಕುರಿತು ಮಾರ್ಮಿಕವಾಗಿ ನುಡಿದರು.

ಅತಿವೃಷ್ಟಿ ಪರಿಹಾರ ಬಿಡುಗಡೆ ಆಗಿಲ್ಲ:
ಮುಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದ ಹಾಳಾಗಿರುವ ರಸ್ತೆಗಳು, ಮನೆಗಳು, ಶಾಲೆ, ಕಾಲೇಜು ಮತ್ತು ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಇನ್ನೂ ಪರಿಹಾರ ಬಿಡುಗಡೆ ಆಗಿಲ್ಲ. ಹಾಸನ ಜಿಲ್ಲೆಗೆ ಕನಿಷ್ಠ 137 ಕೋಟಿ ರೂ. ಪರಿಹಾರದ ಅಗತ್ಯವಿದೆ. ವಿದ್ಯಾರ್ಥಿಗಳು ಮರದ ಕೆಳಗೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ. ಆದ್ದರಿಂದ ಪ್ರತಿ ತಾಲೂಕಿಗೆ 50 ಕೋಟಿ ರೂ. ಪರಿಹಾರ ಅಗತ್ಯವಿದೆ. ಸರ್ಕಾರ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಎಚ್.ಡಿ. ಒತ್ತಾಯಿಸಿದರು.

ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಲು ಆಗ್ರಹ:
ತೆಂಗು ಮತ್ತು ಕೊಬ್ಬರಿ ಬೆಲೆ ಕುಸಿದಿರುವುದರಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈಗ ನಿಗದಿಪಡಿಸಿರುವ ಕೊಬ್ಬರಿ ಬೆಂಬಲ ಬೆಲೆ ಕ್ವಿಂಟಾಲ್‌ಗೆ 11,750 ರೂ. ಏನೇನೂ ಸಾಲದು. ಆದ್ದರಿಂದ ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 15,000 ರೂ.ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿದ್ದು, ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.

ಶಾಲಾ ಕಾಲೇಜು ಕಟ್ಟಡಗಳ ಮೇಲೆ ಬಿಜೆಪಿ ಪ್ರಚಾರ ಬೇಡ:
ಚನ್ನರಾಯಪಟ್ಟಣ ಹಾಗೂ ಇತರ ಭಾಗಗಳಲ್ಲಿ ಶಾಲಾ ಕಾಲೇಜುಗಳ ಗೋಡೆಗಳ ಮೇಲೆ ಬಿಜೆಪಿ ಪ್ರಚಾರದ ಬರಹಗಳನ್ನು ಬರೆಯಲಾಗುತ್ತಿದೆ. ಇದು ಸರಿಯಲ್ಲ. ಜಿಲ್ಲಾಡಳಿತ ತಕ್ಷಣ ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು ಎಂದರು.