ಬೀದರ್: ಬರುವ ಬೀದರ್ ನಗರಸಭೆ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಟಿಕೆಟ್ ಕೊಡಲಾಗುವುದು ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಮೇಶ ಪಾಟೀಲ್ ಸೋಲಪುರ ತಿಳಿಸಿದರು.
ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ ನಗರಸಭೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಕ್ಷಕ್ಕಾಗಿ ಸಲ್ಲಿಸಿದ ಸೇವೆ ಹಾಗೂ ಸಾಮಾಜಿಕ ಕಾಳಜಿಯನ್ನು ಟಿಕೆಟ್ ಗೆ ಪರಿಗಣಿಸಲಾಗುವುದು. ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕರಾದ ಶಾಸಕ ಬಂಡೆಪ್ಪ ಖಾಶೆಂಪುರ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು. ಎಲ್ಲ 35 ವಾಡ್೯ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು, ಕನಿಷ್ಠ 20 ಸ್ಥಾನ ಗೆಲ್ಲುವ ಗುರಿಯಿದೆ ಎಂದರು.
ನಗರಸಭೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಏನೇನು ರಣತಂತ್ರಗಳನ್ನು ರೂಪಿಸಬೇಕು ಎನ್ನುವ ಕುರಿತು ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಿತು. ಸಭೆ ಆರಂಭಕ್ಕೆ ಮುನ್ನ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಮುಖರಾದ ಐಲಿನ್ ಜಾನ್ ಮಠಪತಿ, ಅಶೋಕ ಕೋಡಗೆ, ಮನೋಹರ ದಂಡೆ, ದೇವೇಂದ್ರ ಸೋನಿ, ನಬಿ ಖುರೇಶಿ, ಅಭಿ ಕಾಳೆ, ರಾಜಶೇಖರ ಜವಳೆ, ಪ್ರಭು ಚಿಟ್ಟಾ, ಶಿವರಾಜ ಕಟಗಿ, ಸುದರ್ಶನ ಇದ್ದರು.
ಕಲ್ಯಾಣದಲ್ಲಿ ಅಭ್ಯರ್ಥಿ ಕಣಕ್ಕೆ
ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ ಹೇಳಿದರು. ಪಕ್ಷದ ವರಿಷ್ಠರು ಈಗಾಗಲೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಭರವಸೆ ನೀಡಿದ್ದಾರೆ. ಬಸವಕಲ್ಯಾಣದಲ್ಲಿ ಜೆಡಿ ಎಸ್ ಗೆ ಗಟ್ಟಿ ನೆಲೆ ಇದೆ. ಕ್ಷೇತ್ರದಲ್ಲಿ ಏಳು ಸಲ ಜನತಾ ಪರಿವಾರದ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಮ್ಮೆ ಮಾತ್ರ ಜಯ ಗಳಿಸಿದೆ. ಉಪ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದರು.