ಜಿಲ್ಲೆ

ಪಕ್ಕದ ತಾಲೂಕಿನವರಿಗಿಲ್ಲ ರಸಗೊಬ್ಬರ

ಹಳಿಯಾಳ: ಲಾಕ್​ಡೌನ್ ಹಿನ್ನ್ನೆಲೆಯಲ್ಲಿ ಪಕ್ಕದ ತಾಲೂಕುಗಳ ರೈತರಿಗೆ ರಸಗೊಬ್ಬರ ಮಾರಾಟ ಮಾಡದಂತೆ ಮಾರಾಟಗಾರರಿಗೆ ತಾಲೂಕು ಆಡಳಿತವು ಎಚ್ಚರಿಕೆ ನೀಡಿದೆ.

ತಾಲೂಕಿನ ಗಡಿಗಳಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದರೂ ಧಾರವಾಡ ಗ್ರಾಮೀಣ ಭಾಗದ ಹುಲಕೊಪ್ಪ, ಅಳ್ನಾವರ, ಕಲಘಟಗಿ ಭಾಗದ ರೈತರು ಟ್ರ್ಯಾಕ್ಟರ್ ಮೂಲಕ ಹಳಿಯಾಳಕ್ಕೆ ಆಗಮಿಸಿ ರಸಗೊಬ್ಬರ ಖರೀದಿಸುತ್ತಿದ್ದರು. ಕರೊನಾ ಸೋಂಕಿತರ ಹೆಚ್ಚಿರುವ ಕ್ಷೇತ್ರದಿಂದ ರೈತರು ಆಗಮಿಸುತ್ತಿರುವುದನ್ನು ಕಂಡು ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನ್ನೆಲೆಯಲ್ಲಿ ತಾಲೂಕು ಆಡಳಿತ ಹಳಿಯಾಳ ತಾಲೂಕು ಹೊರತುಪಡಿಸಿ ಹೊರಗಿನವರಿಗೆ ರಸಗೊಬ್ಬರ ಮಾರಾಟ ಮಾಡದಂತೆ ಸೂಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ಧಾರವಾಡ ಮತ್ತು ಹೊರ ತಾಲೂಕುಗಳಿಂದ ರೈತರು ರಸಗೊಬ್ಬರ ಖರೀದಿಸಲು ಬರುತ್ತಿರುವುದು ಗಮನಕ್ಕೆ ಬಂದಿದೆ. ಲಾಕ್​ಡೌನ್ ಮುಗಿಯುವವರೆಗೂ ಹಳಿಯಾಳ ತಾಲೂಕಿನ ರೈತರಿಗೆ ಮಾತ್ರ ರಸಗೊಬ್ಬರ ಮಾರಾಟ ಮಾಡುವಂತೆ ಸೂಚಿಸಿದ್ದೇವೆ. ಗ್ರಾಮಾಂತರ ಭಾಗದ ರೈತರು ರಸಗೊಬ್ಬರ ಖರೀದಿಸಬೇಕಾದರೆ ತಮ್ಮ ಗ್ರಾ.ಪಂ. ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿ, ಎಷ್ಟು ಚೀಲ ರಸಗೊಬ್ಬರದ ಅವಶ್ಯಕತೆಯಿದೆ, ಯಾವ ಮಾರಾಟಗಾರರಿಂದ ಖರೀದಿಸುತ್ತೀರಿ ಎಂಬ ಮಾಹಿತಿಯ ಅರ್ಜಿ ಸಲ್ಲಿಸಿದರೆ, ಗ್ರಾ.ಪಂ.ಗಳು ಪರವಾನಗಿ ಪತ್ರ ನೀಡುತ್ತವೆ. ಹೀಗೆ ಪರವಾನಗಿ ಪತ್ರವನ್ನು ನೀಡಿದವರಿಗೆ ಮಾತ್ರ ರಸಗೊಬ್ಬರ ಮಾರಾಟ ಮಾಡಬೇಕು ಮತ್ತು ಎಲ್ಲ ದಾಖಲೆಗಳನ್ನು ಕಾಯ್ದಿರಿಸುವಂತೆ ಸೂಚಿಸಲಾಗಿದೆ ಎಂದರು.