ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಕೃತಿಯ ವರ್ಣನೆ ಮತ್ತು ಕಾಳಜಿಯಿಂದ ಪಂಪ ಕವಿಯು ಮಿಲ್ಟನ್, ಷೆಲ್ಲಿ, ಶೇಕ್ಸ್ಪಿಯರ್‌ಗಿಂತ ಶ್ರೇಷ್ಠನಾಗಿ ಕಾಣುತ್ತಾನೆ. ಒಂದುವೇಳೆ ಪಂಪನ ಕಾವ್ಯಗಳು ಇಂಗ್ಲಿಷ್‌ಗೆ ಭಾಷಾಂತರಗೊAಡರೆ ಇನ್ನಷ್ಟು ಶ್ರೇಷ್ಠ ಸ್ಥಾನ ಹೊಂದುತ್ತಿದ್ದನು. ಪಂಪನ ಕಾವ್ಯಗಳಲ್ಲಿ ಓದುಗರನ್ನು ಸೆಳೆಯುವ ಅಪಾರ ಶಕ್ತಿ ಇದ್ದು, ೧೧೦೦ ವರ್ಷಗಳ ನಂತರವೂ ಆ ಕಾವ್ಯಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿವೆ ಎಂದು ಹಿರಿಯ ಸಾಹಿತಿ ಪ್ರೊ. ಶಾಂತಿನಾಥ ದಿಬ್ಬದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶತಮಾನೋತ್ತರ ಬೆಳ್ಳಿಹಬ್ಬದ ಸವಿನೆನಪಿನಲ್ಲಿ ಸೋಮವಾರ ಆಯೋಜಿಸಿದ್ದ ಹಳಗನ್ನಡ, ನಡುಗನ್ನಡ ಕಾವ್ಯಗಳ ಕುರಿತ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ `ಪಂಪ ಕವಿಯ ವಿಕ್ರಮಾರ್ಜುನ ವಿಜಯ' (ಪಂಪಭಾರತ) ಕಾವ್ಯದ ರಸಸ್ವಾದನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಆದಿಕವಿ ಪಂಪನು ಒಬ್ಬ ವಿಶ್ವಕವಿ ಮಾತ್ರವಲ್ಲ, ಶ್ರೇಷ್ಠ ಮನೋವಿಜ್ಞಾನಿಯೂ ಆಗಿದ್ದನು. ಅವನು ತನ್ನ ಕಾವ್ಯದ ಉದ್ದಕ್ಕೂ ಮಾಡುವ ನಿಸರ್ಗ, ಶೃಂಗಾರ, ವೈರಾಗ್ಯ, ಶೋಕ ಮೊದಲಾದ ವರ್ಣನೆಗಳಲ್ಲಿ ಬೇರೆ ಬೇರೆ ತಂತ್ರಗಳನ್ನು ಬಳಸಿದ್ದಾನೆ ಎಂದರು
ಭೀಮ ಪ್ರತಿಜ್ಞೆ, ಕೃಷ್ಣ ಸಂಧಾನ, ಭೀಮ- ದ್ರೌಪದಿಯ ಸಂಭಾಷಣೆ, ಕರ್ಣ ಭೇದ ಪ್ರಸಂಗ, ಕುಂತಿ- ಕರ್ಣನ ಒಡಂಬಡಿಕೆ ಮುಂತಾದ ಸಂಭಾಷಣೆಗಳು ಯಥೋಚಿತವಾಗಿವೆ. ಪಂಪನ ಕಾವ್ಯಗಳನ್ನು ಪುನರ್ ಓದಿಗೆ ಒಳಪಡಿಸದಿದ್ದರೆ ಮುಂದೊAದು ದಿನ ಅವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇಟ್ಟು ಪರಿಚಯಿಸಬೇಕಾಗುತ್ತದೆ. ಅಂಥ ಸ್ಥಿತಿಗೆ ಇಂದಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಲುಪಿದ್ದಾರೆ ಎಂದು ವಿಷಾದಿಸಿದರು.
ಸಾ.ಶಿ.ಇಲಾಖೆಯ ನಿವೃತ್ತ ಆಯುಕ್ತ ವೆಂಕಟೇಶ ಮಾಚಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೀರಣ್ಣ ಒಡ್ಡೀನ ನಿರ್ವಹಿಸಿದರು. ಸಂಘದ ಅಧ್ಯಕ್ಷ ಚಂದ್ರಕಾAತ ಬೆಲ್ಲದ, ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಡಿ.ಎಂ. ಹಿರೇಮಠ, ಆರ್.ಜಿ. ತಿಮ್ಮಾಪುರ, ಪ್ರೊ. ಹರ್ಷ ಡಂಬಳ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಶ್ರೀಶೈಲಗೌಡ ಕಮತರ, ಎಚ್.ಡಿ. ನದಾಫ, ಶ್ರೀನಿವಾಸ ವಾಡಪ್ಪಿ, ಡಾ. ಚಿದಾನಂದ ಮಾಸನಕಟ್ಟಿ, ಇತರರಿದ್ದರು.