ಮೈಸೂರು: ಸಾಹಿತ್ಯ ಮತ್ತು ವಿಮರ್ಶೆಯ ದಿಕ್ಕು ಬದಲು ಮಾಡಿದವರು ಪಂಡಿತ್ ರಾಜೀವ್ ತಾರಾನಾಥ್ ಅವರ ಸಾಧನೆ ಗುರುತಿಸಲಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಬೇಸರ ವ್ಯಕ್ತಪಡಿಸಿದರು.
ಪಂಡಿತ್ ರಾಜೀವ್ ತಾರಾನಾಥ್ ಸನ್ಮಾನ ಟ್ರಸ್ಟ್‌ನಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 90 ವರ್ಷ ತುಂಬಿದ ರಾಜೀವ್ ತಾರಾನಾಥ್ ಅವರ ಜನ್ಮದಿನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭೂತ, ವರ್ತಮಾನ ಗೊತ್ತಿರುವ ರಾಜೀವ ಅವರಿಗೆ ದೂರದೃಷ್ಟಿ ಇದೆ. ಸಾಹಿತ್ಯ ಮತ್ತು ವಿಮರ್ಶೆಯ ದಿಕ್ಕು ಬದಲು ಮಾಡಿದವರು ರಾಜೀವ್ ಅವರ ಸಾಹಿತ್ಯದ ಸಾಧನೆ ಗುರುತಿಸಲಿಲ್ಲ. ಅವರಿಗೆ ಸಲ್ಲಬೇಕಾದ ನಿಜ ಗೌರವ ದೊರೆಯಲಿಲ್ಲ ಎಂದರು.
ನವ್ಯಕಾಲದಲ್ಲಿ ಗೋಕಾಕ್ ಮತ್ತು ಅಡಿಗರ ಎರಡು ಕವಲುಗಳು. ನವ್ಯ ಬಿಟ್ಟು ನಾನು ನನ್ನದೇ ಶೈಲಿಯಲ್ಲಿ ಕಾವ್ಯ ಬರೆದೆ. ರಾಜೀವ ಅವರು ಅದನ್ನು ಒಪ್ಪಿದರು. ಆ ದಿನದಿಂದಲೂ ಅವರೊಂದಿಗೆ ಸಂಬಂಧವಿದ್ದು, ಈಗಲೂ ನಾನು ಬರೆದಿದ್ದನ್ನು ಅವರಿಗೆ ತೋರಿಸುತ್ತೇನೆ ಎಂದು ತಿಳಿಸಿದರು.
ಸರೋದ್ ವಾದಕ ಉಸ್ತಾದ್ ಫೈಯಾಜ್ ಖಾನ್ ಮಾತನಾಡಿ, ರಾಜೀವ್ ತಾರಾನಾಥ ಅವರಲ್ಲಿ ಸಂಗೀತದ ಗಂಗೆ ಸದಾ ಹರಿಯುತ್ತಲೆ ಇದ್ದಾಳೆ. ಗಂಗೆಯಷ್ಟೇ ಶುದ್ಧ, ಸ್ವಚ್ಛ. ಇವರ ಬಗ್ಗೆ ಮಾತಾಡುವುದು ಎಂದರೆ ಶಬ್ದಗಳು ಸಣ್ಣದಾಗುತ್ತವೆ. ವ್ಯಕ್ತಿತ್ವ ದೊಡ್ಡದಾಗಿ ನಿಲ್ಲುತ್ತದೆ ಎಂದರು.
ಉಸ್ತಾದ್ ಅಲಿ ಅಕ್ಬರ್ ಖಾನ್, ಪಂ.ರವಿಶಂಕರ್, ಅನ್ನಪೂರ್ಣಾದೇವಿ ಅವರಿಂದ ಕಲಿಯೋದು ಬಹಳ ದೊಡ್ಡದು. ಅದಕ್ಕೆ ದೇವರಿಂದ ವರ ಪಡೆದಿರಬೇಕು. ಅವರ ಪ್ರತಿ ಸ್ವರದಲ್ಲೂ ಆತ್ಮದ ಸಂಗೀತ ಇದೆ. ಒಂದು ಸ್ವರದಿಂದ ಮತ್ತೊಂದು ಸ್ವರಕ್ಕೆ ಹೋಗುವ ಮಧ್ಯದೊಳಗಿನ ರಾಗದ ಸ್ವರೂಪವನ್ನು ರಾಜೀವರಿಂದ ಕಲಿತೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಂಡಿತ್ ರಾಜೀವ್ ತಾರಾನಾಥ್, ನನ್ನ ಸಂಗೀತದ ಗುರು ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬರು ಪ್ರೀತಿ ಕೊಟ್ಟರು. ಒಂದು ರೂಪಾಯಿ ತೆಗೆದುಕೊಳ್ಳದೆ ಸಂಗೀತ ಕಲಿಸಿದರು. ಅನ್ಯಾಯವಾಗಿಯೂ ಬೈದರೂ ಅವರೇ ನನ್ನ ಸಂಗೀತ ದೇವರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ನಮ್ಮ ಜಾತಿಯವರಲ್ಲ ಎಂಬ ಕಾರಣಕ್ಕೆ ಅವರನ್ನು ನೆನಸುವ ಕ್ಷಮತಾ ಕಳೆದುಕೊಂಡಿದ್ದೇವೆ. ಅವರನ್ನು ಒಪ್ಪಿ ಕಾಲಿಗೆ ಬಿದ್ದು, ಸಂಗೀತ ಕಲಿತೆವು. ಅದನ್ನು ಮರೆಯಬಾರದು ಎಂದು ತಮ್ಮ ಗುರುವನ್ನು ನೆನೆದರು.
ಸಂಗೀತದಲ್ಲಿ ಅನೇಕರು ಕರುನಾಡಿಗೆ ಸಿಹಿ ಹಂಚಿದ್ದಾರೆ. ಆದರೆ, ಇಂದು ಅಂತಹ ಸಿಹಿ ಇಲ್ಲದೆ ಬೇವಿನ ಕಹಿ ರಸ ಕುಡಿಯುತ್ತಿದ್ದೇವೆ ಅನಿಸುತ್ತದೆ. ಸಿಹಿ ಕುಡಿಯುವಂತಾಗಬೇಕು. ನಮ್ಮ ರಾಜ್ಯದಲ್ಲಿರುವ ವಿವಿಧ ಸಂಗೀತಗಳು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ರಾಜೀವ್ ತಾರಾನಾಥ ಅವರು ಕಲೆ, ಸಾಹಿತ್ಯ, ಜೀವನ ಅನುಭವ, ಸಾಮಾಜಿಕ ವ್ಯವಸ್ಥೆಯನ್ನು ಸಂಗೀತದ ಮೂಲಕ ಗ್ರಹಿಸುತ್ತಾರೆ. ಪವರ್ತದಂತೆ ಕಾಣುವ ರಾಜೀವರು ಇನ್ನೂ ಎತ್ತರಕ್ಕೆ ಹೋಗಲು ಬಯಸುತ್ತಾರೆ. ಅದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಾರೆ ಎಂದು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜೀವ್ ತಾರಾನಾಥ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ, ಪತ್ರಕರ್ತ ಗಣೇಶ ಅಮೀನಗಡ, ರಘುಪತಿ ತಮ್ಹಣ್‌ಕರ್ ಅವರ ಸಂಪಾದಕತ್ವದ ‘ಸರೋದ್ ಸ್ವರಯಾನ’ 2ನೇ ಮುದ್ರಣ ಬಿಡುಗಡೆ ಮಾಡಲಾಯಿತು. ರಾಜೀವರ ಶಿಷ್ಯರು ಸರೋದ್ ಕಾರ್ಯಕ್ರಮ ಪ್ರಸ್ತುತಪಡಿಸಿದರು.