ಬೀದರ್: ನಗರದ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಕುಲತಾರ್ಸಿಂಗ್ಜಿ ಅವರು ಪಂಜಾಬ್ ವಿಧಾನಸಭೆ ಸ್ಪೀಕರ್ ಹುದ್ದೆಗೇರಿದ್ದಾರೆ. ಕುಲತಾರ್ಸಿಂಗ್ 1993ರ ಬ್ಯಾಚ್ ವಿದ್ಯಾರ್ಥಿಯಾಗಿದ್ದು, ಆಟೋಮೊಬೈಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ.
ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀನಾನಕ್ ಝೀರಾ ಸಾಹೇಬ್ ಫೌಂಡೇಷನ್ ಅಧ್ಯಕ್ಷ ಡಾ.ಸರ್ದಾರ್ ಬಲಬೀರ್ಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್ ಅವರು ಸ್ಪೀಕರ್ ಕುಲತಾರ್ಸಿಂಗ್ಜಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಯೊಬ್ಬರು ವಿಧಾನಸಭೆ ಸ್ಪೀಕರ್ ಹುದ್ದೆಗೇರಿದ್ದು ಹೆಮ್ಮೆಯ ಸಂಗತಿ. ಕುಲತಾರ್ಸಿಂಗ್ ಅವರ ರಾಜಕೀಯ ಸಾಧನೆ ನಿಜಕ್ಕೂ ಅನುಕರಣೀಯ. ಇದೊಂದು ಹೆಮ್ಮೆ ಮತ್ತು ಗೌರವದ ವಿಷಯ. ಉನ್ನತ ಹುದ್ದೆ ಅಲಂಕರಿಸಿರುವ ಹಳೆಯ ವಿದ್ಯಾರ್ಥಿಗಳು ತಾವು ಅಭ್ಯಸಿಸಿದ ಕಾಲೇಜಿನ ಬೆಳವಣಿಗೆಗೆ ನೆರವು ನೀಡಬೇಕು ಎಂದು ರೇಷ್ಮಾ ಕೌರ್ ಸಲಹೆ ನೀಡಿದರು.
ಸಮಾರಂಭದಲ್ಲಿ ವಿವಿಧ ಬ್ಯಾಚ್‍ಗಳಲ್ಲಿ ಅಭ್ಯಸಿಸಿದ ಜಿಎನ್‍ಡಿ ಕಾಲೇಜಿನ 140ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಳೇ ವಿದ್ಯಾರ್ಥಿ ಸಂಘದ ಡೀನ್ ಪ್ರೊ.ಗುರುಪ್ರಸಾದ, ಪ್ರೊ.ರಾಜಶೇಖರ ಗಾಯತೊಂಡ, ದೈಹಿಕ ಶಿಕ್ಷಣ ನಿರ್ದೇಶಕ ಮಹ್ಮದ್ ಅಬ್ದುಲ್ ಗಾರ್ ಇತರರಿದ್ದರು.