ಜಿಲ್ಲೆ

ಪಂಚಾಯಿತಿಗೊಂದು ಮಾದರಿ ಶಾಲೆ : ತಾಲೂಕಿಗೊಂದರಂತೆ ಜಿಲ್ಲೆಯ 4 ಕಡೆ ಆರಂಭ

ಗಂಗಾಧರ್ ಬೈರಾಪಟ್ಟಣ ರಾಮನಗರ: ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಂಚಾಯಿತಿಗೊಂದು ಮಾದರಿ ಶಾಲೆ ಆರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಲ್ಲಿ ವಿಲವಾಗುತ್ತಿರುವ ಸರ್ಕಾರಿ ಶಾಲೆಗಳಿಂದ ಮಕ್ಕಳು ವಿಮುಖರಾಗುತ್ತಿದ್ದಾರೆ. ಸರ್ಕಾರ ಸಹ ಶಾಲೆಗಳಿಗೆ ಅಗತ್ಯ ಸಿಬ್ಬಂದಿ ಮತ್ತು ಸೌಕರ್ಯ ನೀಡುವಲ್ಲಿಯೂ ವಿಲವಾಗುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳು ಬಾಗಿಲು ಹಾಕುವ ಹಂತಕ್ಕೆ ಬಂದಿವೆ. ಇದನ್ನೆಲ್ಲ ಮನಗಂಡು ಪ್ರತಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ತೆರೆದು 1ರಿಂದ 7ನೇ ತರಗತಿವರೆಗೂ ಒಂದೇ ಸೂರಿನಡಿ ಶಿಕ್ಷಣ ಒದಗಿಸುವ ಕೆಲಸ ಮಾಡಲು ಜಿಪಂ ಸಹಯೋಗದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ಗ್ರಾಪಂಗೆ ಒಂದೇ ಶಾಲೆ: ನಾಲ್ಕೂ ತಾಲೂಕುಗಳಲ್ಲಿ ತಲಾ ಒಂದು ಗ್ರಾಪಂ ಕೇಂದ್ರ ಸ್ಥಾನದ ಶಾಲೆ ಆಯ್ಕೆ ಮಾಡಿಕೊಂಡು, ಇದರ ವ್ಯಾಪ್ತಿಗೆ ಒಳಪಡುವ ಎಲ್ಲ ಶಾಲೆಗಳನ್ನು ಒಂದೇ ಶಾಲೆಗೆ ವಿಲೀನ ಮಾಡಲಾಗುತ್ತದೆ. ಇದರಿಂದಾಗಿ ಮಕ್ಕಳು ಒಂದೇ ಸೂರಿಗೆ ಬರುವ ಜತೆಗೆ, ಎಲ್ಲ ಶಾಲೆಗಳ ಅಡುಗೆ ಸಿಬ್ಬಂದಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹೀಗೆ ಎಲ್ಲರೂ ಇದೇ ಶಾಲೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದ ಕೆಲವು ಶಾಲೆಗಳಲ್ಲಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ನೀಗುವುದಲ್ಲದೆ ವಿಷಯಾಧಾರಿತ ಶಿಕ್ಷಕರ ಕೊರತೆಯೂ ದೂರವಾಗುತ್ತದೆ.

ಮಕ್ಕಳಿಗೆ ಸಾರಿಗೆ ವ್ಯವಸ್ಥೆ: ಗ್ರಾಪಂಗೆ ಒಂದು ಮಾದರಿ ಶಾಲೆ ಆರಂಭಿಸಲು ಬಹುತೇಕ ಕೊಠಡಿಗಳು ಲಭ್ಯವಿರುವ, ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿರುವ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸ್ಥಾನದ ಶಾಲೆಗೆ ವಿಲೀನಗೊಳ್ಳುವ ಶಾಲೆಗಳ ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಆಯಾ ಗ್ರಾಮದ ಮಕ್ಕಳನ್ನು ಬಸ್‌ಗಳು ಇಲ್ಲವೇ ಮಿನಿ ವ್ಯಾನ್‌ಗಳ ಮೂಲಕ ಶಾಲೆಗೆ ಕರೆತರುವ ಕೆಲಸವೂ ಆಗುತ್ತಿದೆ. ಸ್ಥಳೀಯ ಕೈಗಾರಿಕೆ ಪ್ರದೇಶದಲ್ಲಿರುವ ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯಲ್ಲಿ ಬಸ್‌ಗಳನ್ನು ಪಡೆಯುವ ಪ್ರಯತ್ನವೂ ಜಿಪಂ ಸಿಇಒ ಇಕ್ರಂ ನೇತೃತ್ವದಲ್ಲಿ ನಡೆಯುತ್ತಿದ್ದು, ಇದಕ್ಕೆ ಕಂಪನಿಗಳೂ ಸಕಾರಾತ್ಮವಾಗಿ ಸ್ಪಂದಿಸಿವೆ ಎಂದು ತಿಳಿದು ಬಂದಿದೆ.

ಎಲ್ಲೆಲ್ಲಿ ?: ಪ್ರಸಕ್ತ ಸಾಲಿನಲ್ಲಿ ಒಂದು ತಿಂಗಳು ಬಾಕಿ ಇರುವ ಕಾರಣ ಪ್ರಾಯೋಗಿಕವಾಗಿ ಪಂಚಾಯಿತಿಗೊಂದು ಮಾದರಿ ಶಾಲೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಚನ್ನಪಟ್ಟಣದ ಚಕ್ಕೆರೆ, ರಾಮನಗರದ ಗಾಣಕಲ್, ಮಾಗಡಿಯ ಸಂಕೀಘಟ್ಟ ಮತ್ತು ಕನಕಪುರದ ಉಯ್ಯಂಬಳ್ಳಿಯಲ್ಲಿ ಮಾದರಿ ಶಾಲೆಗಳು ಆರಂಭವಾಗಲಿವೆ. ಇಲ್ಲಿ ಮಾದರಿ ಶಾಲೆಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ನೀಡಿ, ಇಲ್ಲಿನ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ ಮುಂದಿನ ವರ್ಷದಿಂದ ಮತ್ತಷ್ಟು ಗ್ರಾಪಂಗಳಿಗೆ ಮಾದರಿ ಶಾಲೆಗಳನ್ನು ವಿಸ್ತರಣೆ ಮಾಡುವ ಕೆಲಸ ನಡೆಯಲಿದೆ.

ಏನೆಲ್ಲ ಸೌಲಭ್ಯ ದೊರೆಯಲಿದೆ: ಭವಿಷ್ಯದಲ್ಲಿ ಆರಂಭಗೊಳ್ಳುವ ಮಾದರಿ ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯಗಳು ದೊರೆಯಲಿವೆ. ಮಕ್ಕಳಿಗೆ ಅವರ ಮನೆ ಬಾಗಿಲಿನಿಂದಲೇ ಸಾರಿಗೆ ಸೇವೆ ದೊರೆಯುವ ಜತೆಗೆ, ಎಲ್‌ಕೆಜಿಯಿಂದ 10ನೇ ತರಗತಿವರೆಗೂ ಇರುವ ಮಾದರಿ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ ನಲಿ-ಕಲಿ ತರಬೇತಿಗೊಂಡ ಶಿಕ್ಷಕರು, ಮಾಧ್ಯಮವಾರು, ತರಗತಿವಾರು ತರಬೇತಿಗೊಂಡ ಶಿಕ್ಷಕರು, ದೈಹಿಕ ಶಿಕ್ಷಕರು, ತೋಟಗಾರಿಕೆ ಶಿಕ್ಷಕರು, ನಲಿ ಕಲಿ ತರಗತಿಗಳಿಗೆ ಮೂರು ಕೊಠಡಿಗಳು, ತರಗತಿವಾರು, ವಿಭಾಗವಾರು ಪ್ರತ್ಯೇಕ ಕೋಣೆಗಳು, ಕಂಪ್ಯೂಟರ್, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ಕೊಠಡಿಗಳು, ಲಿಂಗವಾರು ಪ್ರತ್ಯೇಕ ಶೌಚಗೃಹ, ಶುದ್ಧ ನೀರಿನ ವ್ಯವಸ್ಥೆ, ಕಾಂಪೌಂಡ್, ಕೈ ತೋಟ, ಆಟದ ಮೈದಾನ, ರಂಗಮಂದಿರ, ಸ್ಟೀಮ್ ವ್ಯವಸ್ಥೆ ಇರುವ ಅಡುಗೆ ಮನೆ ಮತ್ತು ಭೋಜನಾಲಯ ಮಾದರಿ ಶಾಲೆಯಲ್ಲಿ ಇರುತ್ತವೆ.

ಶೀಘ್ರವೇ ಉದ್ಘಾಟನೆ: ಲಭ್ಯ ಮಾಹಿತಿ ಪ್ರಕಾರ ಈ ನಾಲ್ಕೂ ಶಾಲೆಗಳ ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳ ಸಹಭಾಗಿತ್ವ ಕೋರಲಾಗಿದೆ. ಇದೂ ಸಹ ಅಂತಿಮ ರೂಪಕ್ಕೆ ಬಂದಿದ್ದು, ಸ್ಥಳೀಯ ಶಾಸಕರು ನೀಡುವ ದಿನಾಂಕದಂದು ಬಹುತೇಕ ಆಯಾ ತಾಲೂಕುಗಳಲ್ಲಿ ಮಾದರಿ ಶಾಲೆಗಳು ಉದ್ಘಾಟನೆಗೊಳ್ಳಲಿವೆ.

ಸಿಇಒ ಪರಿಶೀಲನೆ: ಗ್ರಾಪಂಗೊಂದು ಮಾದರಿ ಶಾಲೆ ಸ್ಥಾಪನೆ ಹಿಂದೆ ಜಿಪಂ ಸಿಇಇ ಇಕ್ರಂ ಶ್ರಮವೂ ಅಡಗಿದೆ. ಪ್ರತಿ ಶಾಲೆಯಲ್ಲಿ ಏನೆಲ್ಲ ಇರಬೇಕು, ಬೇಡ ಎನ್ನುವುದನ್ನು ಪ್ರತಿ ಹಂತದಲ್ಲಿಯೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಿದ್ದು, ಪ್ರತಿ ಶಾಲೆಗೂ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಅಂತಿಮ ರೂಪಕ್ಕೆ ಬರಲಿವೆ. ಸ್ಥಳೀಯ ಶಾಸಕರ ದಿನಾಂಕ ಪಡೆದುಕೊಂಡು ಉದ್ಘಾಟನೆ ಮಾಡಲಾಗುವುದು. ಗಂಗಣ್ಣ ಸ್ವಾಮಿ, ಡಿಡಿಪಿಐ, ರಾಮನಗರ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮಾದರಿ ಶಾಲೆ ಆರಂಭಿಸಲು ಯೋಜಿಸಿ, ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದ ಮೂಲಸೌಕರ್ಯ ಹಾಗೂ ಅಗತ್ಯ ಸಿಬ್ಬಂದಿ ದೊರೆಯಲಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಶಿಕ್ಷಕರ ಮೇಲಿನ ಒತ್ತಡವೂ ಕಡಿಮೆ ಆಗುತ್ತದೆ. ಇಕ್ರಂ, ಸಿಇಒ, ರಾಮನಗರ ಜಿಪಂ