ಬಾಗಲಕೋಟೆ: ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಇಲ್ಲದ್ದರಿಂದ ರೊಚ್ಚಿಗೆದ್ದಿದ್ದ ಜನರು ಪಂಚಾಯಿಸಿ ಎದುರೇ ಪಾರ್ಥೀವ ಶರೀರದ ದಹನಕ್ಕೆ ಮುಂದಾಗಿದ್ದಾಗ ಎಚ್ಚೆತ್ತ ಅಧಿಕಾರಿಗಳು ಅಂತಿಮ ಸಂಸ್ಕಾರಕ್ಕೆ ಜಾಗೆ ಒದಗಿಸುವ ಮೂಲಕ ಸಮಸ್ಯೆ ಬಗೆಹರಿಸಿದ ಘಟನೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದಲ್ಲಿ ಕೆಲ ವರ್ಷಗಳಿಂದ ಸ್ಮಶಾನ ಜಾಗೆ ಇಲ್ಲದೇ ಬಡವರು, ಸ್ವಂತ ಜಮೀನು ಇಲ್ಲದ ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದ್ದರೆ ಅಂತ್ಯಸಂಸ್ಕಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆ ಇತ್ಯರ್ಥವಾಗಿರಲಿಲ್ಲ.
ಶುಕ್ರವಾರ ರಾತ್ರಿ ಗ್ರಾಮದ ಕಾಳಪ್ಪ ಕಂಬಾರ(49) ಸಾವನ್ನಪ್ಪಿದ್ದರು. ಇವರಿಗೆ ಸ್ವಂತ ಜಮೀನು ಇಲ್ಲದ್ದರಿಂದ ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಆಗಿತ್ತು. ಪ್ರತಿಸಲವೂ ಇದೇ ಸಮಸ್ಯೆ ಆಗಿದ್ದರಿಂದ ತಾಳ್ಮೆ ಕಳೆದುಕೊಂಡ ಜನರು, ಇಂದು ಬೆಳಗ್ಗೆ ಗ್ರಾಮ ಪಂಚಾಯಿತಿ ಎದುರೆ ಶವ ದಹಿಸಲು ಸಿದ್ದತೆ ಮಾಡಿಕೊಂಡು ಕಟ್ಟಿಗೆ ಜೋಡಿದ್ದಲ್ಲದೇ ಶವ ಮೆರವಣಿಗೆ ಬಳಿಕ ಚಿತೆ ಮೇಲೆ ಇಟ್ಟು ಎಲ್ಲ ಧಾರ್ಮಿಕ ವಿಧಿ ವಿಧಾನ ಮುಗಿಸಿ ಅಲ್ಲಿಯೇ ದಹಿಸಲು ಮುಂದಾಗಿದ್ದರು.
ಈ ವೇಳೆ ಸ್ಥಳಕ್ಕೆ ಬಾದಾಮಿ ತಹಸೀಲ್ದಾರ್ ಜೆ.ಬಿ.ಮಜ್ಜಗಿ ಆಗಮಿಸಿ, ಸಾರ್ವಜನಿಕರ ಮನವೊಲಿಸುವ ಪ್ರಯತ್ನ ಮಾಡಿದರು. ಆರಂಭದಲ್ಲಿ ಪೊಲೀಸರು ಮತ್ತು ತಹಸೀಲ್ದಾರ್ ಜೊತೆ ತೀವ್ರ ವಾಗ್ವಾದ ನಡೆಸಿದರು. ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಗ್ರಾಮದಲ್ಲಿ ವಿವಾದದಲ್ಲಿ ಇದ್ದ ಸರ್ಕಾರದ 28 ಗುಂಟೆ ಜಮೀನಿನಲ್ಲಿ ಅಂತ್ಯಸಂಸ್ಕಾರದ ವ್ಯವಸ್ಥೆ ಮಾಡುವುದಾಗಿ ಅಭಯ ನೀಡಿದರು. ಅಲ್ಲದೇ ಅದನ್ನು ಸ್ಮಶಾನಕ್ಕೆ ನೀಡುವುದಾಗಿ, ಈ ಬಗ್ಗೆ ಸೋಮವಾರವೇ ಆದೇಶ ಹೊರಡಿಸುವುದಾಗಿ ಹೇಳಿದ ಬಳಿಕ ಜನರು ಶವ ಸ್ಥಳಾಂತಕ್ಕೆ ಒಪ್ಪಿದರು.
ಕೋಳಿ ದಹಿಸಿ, ಶವ ಸ್ಥಳಾಂತರ: ಇನ್ನು ಶವ ಸ್ಥಳಾಂತಕ್ಕೆ ಒಪ್ಪಿದರಾದರೂ ಚಿತೆಯ ಮೇಲೆ ಇಟ್ಟು ಶವ ಕೆಳಕ್ಕೆ ಇಳಿಸಲು ಬರಲ್ಲ. ಇಲ್ಲಿಯೇ ದಹನ ಮಾಡಬೇಕು ಎನ್ನುವ ಮಾತುಗಳು ಕೇಳಿ ಬಂದವು. ಆಗ ಇದಕ್ಕೆ ಪರಿಹಾರ ಎನ್ನುವಂತೆ ಹಿರಿಯರ ಸಲಹೆ ಮೇರಿಗೆ ಪಂಚಾಯಿತಿ ಚಾವಡಿ ಬಳಿ ಸಿದ್ದಪಡಿಸಿದ್ದ ಚಿತೆಯಲ್ಲಿ ಜೀವಂತ ಕೋಳಿಯನ್ನು ದಹಿಸಿ ಅಲ್ಲಿದ್ದ ಶವವನ್ನು ತೆಗೆದು ಟ್ರ್ಯಾಕ್ಟರ್ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದರು. ಜನರ ಪ್ರತಿಭಟನೆಯಿಂದಾಗಿ ಕೊನೆಗೂ ಎಚ್ಚೆತ್ತ ಅಧಿಕಾರಿಗಳು 28 ಗುಂಟೆ ಜಾಗೆಯನ್ನು ಸ್ಮಶಾನಕ್ಕಾಗಿ ಒದಗಿಸಿದ್ದಾರೆ.
ತಕರಾರಿಗೆ ತಹಸೀಲ್ದಾರ್ ಗರಂ : ಬುಗಿಲೆದ್ದಿದ್ದ ಜನರ ಆಕ್ರೋಶ ತಣಿಸಲು ಊರಿಗೆ ಹೊಂದಿಕೊಂಡಂತೆ 28 ಗುಂಟೆ ಜಾಗೆ ಒದಿಸುವ ಅಭಯವನ್ನು ನೀಡಿದ್ದ ತಹಸೀಲ್ದಾರ್ ಆ ಜಾಗೆ ತೋರಿಸಲು ಜನರನ್ನು ತಾವೇ ಕರೆದುಕೊಂಡು ಹೋಗಿದ್ದರು. ಆದರೆ, ಆ ಜಮೀನು ವಿವಾದದಲ್ಲಿ ಇದ್ದು, ನ್ಯಾಯಾಲಯದಲ್ಲಿ ಇದೆ ಎಂದು ಸಿದ್ದಣ್ಣ ಗೌಡರ ಅಂತ್ಯಸಂಸ್ಕಾರಕ್ಕೆ ತಕರಾರು ಮಾಡಿದ್ದು ತಹಸೀಲ್ದಾರ್ ಗರಂ ಆಗುವಂತೆ ಮಾಡಿತು.