ಜಿಲ್ಲೆ

ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ ಜಪ್ತಿ

Dharwad

ವಿಜಯವಾಣಿ ಸುದ್ದಿಜಾಲ ಧಾರವಾಡ
ನೀರು ಸರಬರಾಜು ಯೋಜನೆಗೆ ಸಂಬಂಧಿಸಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನಗರದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಚೇರಿಯ ವಸ್ತುಗಳನ್ನು ಮಂಗಳವಾರ ಜಪ್ತಿ ಮಾಡಲಾಯಿತು.
ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ವಿರೂಪಾಕ್ಷಪ್ಪ ಕೊಳ್ಳಿಯವರ ಅವರ 4 ಎಕರೆ ಜಮೀನನ್ನು 2013ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಬಳಿಕ 2016ರಲ್ಲಿ 4 ಎಕರೆಗೆ 46 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಆದರೆ ಪರಿಹಾರ ಹಣ ಅತ್ಯಂತ ಕಡಿಮೆಯಾಗಿದೆ. ಸೂಕ್ತ ಹೆಚ್ಚುವರಿ ಪರಿಹಾರ ನೀಡುವಂತೆ 2017ರಲ್ಲಿ ವಿರೂಪಾಕ್ಷಪ್ಪ ನ್ಯಾಯಾಲಯ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ ಹೆಚ್ಚುವರಿಯಾಗಿ 2.65 ಕೋಟಿ ರೂ. ಪರಿಹಾರ ನೀಡುವಂತೆ ಒಂದು ವರ್ಷದ ಹಿಂದೆ ಆದೇಶ ಹೊರಡಿಸಿತ್ತು. ಆದರೆ ಇಲಾಖೆ ಮಾತ್ರ ಈವರೆಗೂ ನಯಾಪೈಸೆ ಪರಿಹಾರ ನೀಡದೆ ವಿಳಂಬ ನೀತಿ ಅನುಸರಿಸಿದೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ವಕೀಲ ಎಸ್.ಎ. ಹುಲ್ಲೂರ ಸಮ್ಮುಖದಲ್ಲಿ ಶನಿವಾರ ಜಪ್ತಿ ಮಾಡಲಾಗಿದೆ.
ಕಂಪ್ಯೂಟರ್, ಝರಾಕ್ಸ್ ಯಂತ್ರ, ಖುರ್ಚಿ, ಪ್ರಿಂಟರ್, ಸೇರಿ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆದರೆ ಇಲಾಖೆ ಅಧಿಕಾರಿಗಳು ತಿಂಗಳಾಂತ್ಯದಲ್ಲಿ ಪರಿಹಾರ ಹಣ ನೀಡುವುದಾಗಿ ಹೇಳಿದ್ದರಿಂದ ಝರಾಕ್ಸ್ ಯಂತ್ರವನ್ನು ಮಾತ್ರ ಜಪ್ತಿ ಮಾಡಿ ಉಳಿದ ವಸ್ತುಗಳನ್ನು ಮರಳಿಸಲಾಗಿದೆ.