ಜಿಲ್ಲೆ

ಪಂಚರಾಜ್ಯ ಫಲಿತಾಂಶ ಪ್ರಭಾವ ಬೀರದು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

ಕೋಲಾರ: ಪಂಚರಾಜ್ಯ ಚುನಾವಣೆ ತೀರ್ಪಿನಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದರೂ, ರಾಜ್ಯದ ಮೇಲೆ ಪ್ರಭಾವ ಬಿರುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕೋಲಾರದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ ಅಲ್ಲಿ ನಮ್ಮ ಸ್ವಯಂಕೃತ ಅಪರಾಧದಿಂದ ಸೋಲಬೇಕಾಯಿತು. ಚುನಾವಣೆಗಳಲ್ಲಿ ಸೋಲು-ಗೆಲುವು ಸ್ವಾಭಾವಿಕವಾಗಿದ್ದು, ಆತ್ಮಾವಲೋಕನಕ್ಕೆ ಇದು ಸುಸಮಯ. ರಾಷ್ಟ್ರ ನಾಯಕರು ಮುಂದಿನ ತೀರ್ವಾನ ತೆಗೆದುಕೊಳ್ಳುತ್ತಾರೆ. ಹಾಗೆಂದು ನಾಯಕತ್ವ ಬದಲಾವಣೆ ಆಗಲ್ಲ, ಸೋನಿಯಾ, ರಾಹುಲ್‌ಗಾಂಧಿಯವರೇ ಪಕ್ಷ ಮುನ್ನಡೆಸುತ್ತಾರೆ ಎಂದರು.

ಪ್ರಬಲ ನಾಯಕತ್ವ ಇಲ್ಲ ಎನ್ನುವುದು ಸರಿಯಲ್ಲ. ಮನಮೋಹನ್ ಸಿಂಗ್ 2 ಬಾರಿ ಪ್ರಧಾನಿಯಾಗಿದ್ದಾಗ ಸೋನಿಯಾಗಾಂಧಿ ಪಕ್ಷ ಮುನ್ನಡೆಸಿರಲಿಲ್ಲವೇ? ವಾಜಪೇಯಿ, ಲಾಲ್‌ಕೃಷ್ಣ ಆಡ್ವಾನಿ ಇಬ್ಬರೇ ಬಿಜೆಪಿಯಲ್ಲಿ ಗೆದ್ದಿದ್ದ ಕಾಲವೊಂದಿತ್ತು. ಆದರೆ ಅವರಿಬ್ಬರೇ ಪಕ್ಷ ಅಧಿಕಾರಕ್ಕೆ ತರುವಂತೆ ಮಾಡಲಿಲ್ಲವೇ? ಅವರು ನಾಯಕರಲ್ವಾ? ವಾಜಪೇಯಿಗಿಂತ ದೊಡ್ಡ ನಾಯಕರಾ ಪ್ರಧಾನಿ ನರೇಂದ್ರ ಮೋದಿ? ನಾವು ಅಧಿಕಾರದ ಭ್ರಮೆಯಲ್ಲಿ ತೇಲುತ್ತಿಲ್ಲ. ಜನರ ನಾಡಿ ಮಿಡಿತ ಅರಿತು ಮಾತನಾಡುತ್ತಿದ್ದೇವೆ. ನಾವೇ ಮುಂದಿನ ಬಾರಿ ಅಧಿಕಾರಕ್ಕೆ ಬರುತ್ತೇವೆ. ಜನಾಶೀರ್ವಾದ ಬಂದ ಮೇಲೆ ಶಾಸಕರು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಹೈಕವಾಂಡ್ ಅದಕ್ಕೆ ಮುದ್ರೆ ಒತ್ತುತ್ತದೆ. ಅದಕ್ಕೆ ಎಲ್ಲರೂ ಬದ್ಧ ಎಂದರು.

ರಾಜ್ಯದಲ್ಲಿ ಬಿಜೆಪಿ ಎಂದೂ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. 2008, 2013 ಮತ್ತು 2018ರಲ್ಲಿ ಬೇರೊಬ್ಬರ ಬೆಂಬಲ ಮತ್ತು ಆಪರೇಷನ್ ಕಮಲ ಮಾಡಿ ಅಧಿಕಾರದ ಸವಿಯುಂಡಿದೆ. ಮುಂದಿನ ಚುನಾವಣೆಯಲ್ಲೂ ಅವರು ಬಹುಮತ ಪಡೆಯಲ್ಲ. ಕಾಂಗ್ರೆಸ್ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಜನರೂ ಒಲವು ತೋರುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಮಾಡಿ ಸರ್ಕಾರಗಳ ಗಮನ ಸೆಳೆಯುವಂತೆ ಮಾಡಿದ್ದೇವೆ. ಮುಂದೆ ಮಹದಾಯಿ, ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ 371 ಜೆ ಜಾರಿ, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ, ಕರಾವಳಿಯಲ್ಲಿ ವಿಷಯಾಧಾರಿತ ಹೋರಾಟ ನಡೆಸುತ್ತೇವೆ ಎಂದರು.

ಶಾಸಕರಾದ ಕೆ.ಆರ್.ರಮೇಶ್‌ಕುವಾರ್, ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ಎಂಎಲ್ಸಿ ಅನಿಲ್ ಕುವಾರ್, ನಜೀರ್ ಅಹ್ಮದ್. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಇತರರಿದ್ದರು.

ಒಂದು ಕಡೆ ವಾತ್ರ ಸ್ಪರ್ಧೆ: ಚಾಮುಂಡೇಶ್ವರಿಯಲ್ಲಿ ಜನ ನನ್ನನ್ನು ತಿರಸ್ಕರಿಸಿದ್ದು, ಮತ್ತೆ ಅಲ್ಲಿಂದ ಚುನಾವಣೆ ಎದುರಿಸಲ್ಲ. ಮುಂದೆ ಹೆಬ್ಬಾಳ, ಚಾಮರಾಜಪೇಟೆ, ಹುಣಸೂರು, ಕೊಪ್ಪಳ, ಕೋಲಾರದಿಂದ ಸ್ಪರ್ಧಿಸುವಂತೆ ಅಭಿವಾನಿಗಳು ಒತ್ತಾಯಿಸುತ್ತಿದ್ದಾರೆ. ಬಾದಾಮಿ ದೂರವಿದ್ದು, ಹತ್ತಿರದ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡುತ್ತಿದ್ದಾರೆ. ಆದರೆ ನಾನಿನ್ನೂ ತೀರ್ವಾನ ಮಾಡಿಲ್ಲ. ಒಂದು ಕಡೆ ಮಾತ್ರ ಸ್ಪರ್ಧಿಸುತ್ತೇನೆ. ಪಕ್ಷದಲ್ಲಿ ನನ್ನನ್ನು ಸೋಲಿಸಲು ಯಾರೂ ಯತ್ನಿಸುತ್ತಿಲ್ಲ. ನನ್ನ ಭಯ ಕಾಡುತ್ತಿರುವುದರಿಂದ ಜೆಡಿಎಸ್, ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಜೆಡಿಎಸ್ ಜಾತ್ಯತೀತ ಪಕ್ಷವಲ್ಲ. ಅದನ್ನು ಬಿಜೆಪಿ ಬಿ ಟೀಮ್ ಎಂದು ಕರೆದಿದ್ದರಲ್ಲಿ ಅರ್ಥವಿದೆ. ಬಿಜೆಪಿ ಈ ಹಿಂದೆ ಆ ಪಕ್ಷ ಬೆಂಬಲಿಸಿ ಅಧಿಕಾರ ಹಿಡಿದಿರಲಿಲ್ಲವೇ. ಮುಂದೆ ಏನು ಮಾಡುತ್ತಾರೋ ನೋಡಬೇಕು. ಒಳ ಒಪ್ಪಂದ ಮಾಡಿಕೊಂಡರೂ ನಮಗೆ ಭಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇಬ್ರಾಹಿಂಗೆ ಪಕ್ಷ ಎಲ್ಲ ನೀಡಿತ್ತು: ಸಿಎಂ ಇಬ್ರಾಹಿಂ ಪಕ್ಷದಿಂದ ಹೊರಹೋಗುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. 2013ರಲ್ಲಿ ಭದ್ರಾವತಿಯಲ್ಲಿ ಸಂಗಮೇಶ್‌ಗೆ ಟಿಕೆಟ್ ತಪ್ಪಿಸಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದೆವು. ಆದರೆ ಅಲ್ಲಿ ಮೂರನೇ ಸ್ಥಾನಕ್ಕೆ ಹೋಗಿದ್ದ ಇಬ್ರಾಹಿಂಗೆ ನಂತರ ಯೋಜನಾ ಮಂಡಳಿ ಉಪಾಧ್ಯಕ್ಷ, ಎಂಎಲ್‌ಸಿ ಮಾಡಿದ್ದೆವು. ಪರಿಷತ್ ವಿರೋಧ ವಿಪಕ್ಷ ನಾಯಕನ ಸ್ಥಾನ ಸಿಗಲಿಲ್ಲ ಎಂದು ಹೊರಹೋಗಿದ್ದಾರೆ. ಅಲ್ಪಸಂಖ್ಯಾತರಿಗೆ 3 ಸಾವಿರ ಕೋಟಿ ರೂ. ಇದ್ದ ಅನುದಾನ 880 ಕೋಟಿ ರೂ.ಗೆ ಈಗಿನ ಸರ್ಕಾರ ಇಳಿಸಿದ್ದರೂ ಅವರು ಪರಿಷತ್‌ನಲ್ಲಿ ಚಕಾರ ಎತ್ತಿಲ್ಲ. ಈಗ ಪಕ್ಷ ಏಕೆ ಬಿಟ್ಟರೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.