ನಾಗಮಂಗಲ: ತಾಲೂಕಿನಲ್ಲಿ ಡಿ.26 ರಂದು ಆಯೋಜಿಸಿರುವ ಪಂಚರತ್ನ ರಥಯಾತ್ರೆಯನ್ನು ಕಳೆದ ಬಾರಿಯ ಕುಮಾರಪರ್ವ ಮೀರಿಸುವಂತೆ ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ಶಾಸಕ ಸುರೇಶ್‌ಗೌಡ ಕಾರ್ಯಕರ್ತರಿಗೆ ಮನವಿ ಮಾಡಿದರು.
ತಾಲೂಕಿನ ನೆಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರ ಸಭೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. 2018ರ ಚುನಾವಣೆಯಲ್ಲಿ ತಾಲೂಕಿನಲ್ಲಿ ಆಯೋಜಿಸಿದ್ದ ಕುಮಾರಪರ್ವ ಇಡೀ ರಾಜ್ಯದಲ್ಲಿಯೇ ಮಾದರಿಯಾಗಿತ್ತು. ಅಷ್ಟರಮಟ್ಟಿಗೆ ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರಿಗೆ ಪ್ರೀತಿ ತೋರಿಸಿದ್ದೀರಿ. ಈಗ ಪಂಚರತ್ನ ಯಾತ್ರೆ ಆರಂಭಗೊಂಡಿದ್ದು 26 ರಂದು ಕೆ.ಆರ್.ಪೇಟೆ ತಾಲೂಕಿನಿಂದ ಬೆಳಗ್ಗೆ 10 ಗಂಟೆಗೆ ತಾಲೂಕಿನ ಗಡಿಗೆ ರಥಯಾತ್ರೆ ಆಗಮಿಸಲಿದೆ. ಬೋಗಾದಿ, ಕರಿಕ್ಯಾತನಹಳ್ಳಿ, ಸುಖಧರೆ, ಅದ್ದಿಹಳ್ಳಿ, ಬಿಂಡಿಗನವಿಲೆ ಮೂಲಕ ಬೆಳ್ಳೂರು ತಲುಪಲಿದೆ. ನಂತರ ನಾಗಮಂಗಲ ಪಟ್ಟಣದಲ್ಲಿ ಬೃಹತ್ ಸಭೆ ಆಯೋಜಿಸಲಾಗಿದೆ. ಜೆಡಿಎಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇನ್ನುಳಿದ ಗ್ರಾಮಗಳನ್ನು ಚುನಾವಣೆಯೊಳಗೆ ಅಭಿವೃದ್ಧಿಗೊಳಿಸಿ ಜನರ ಬಳಿ ಮತಕೇಳಲು ಹೋಗುತ್ತೇನೆ. ಪ್ರತಿ ಪಕ್ಷದವರು ಅವರದ್ದೇ ಪಕ್ಷದ ಕಾರ್ಯಕರ್ತರಿಗೆ ಹಾರ ಹಾಕಿಸಿಕೊಂಡು ಪಕ್ಷ ಸೇರ್ಪಡೆ ಎಂದು ಹೇಳಿಕೊಳ್ಳುತ್ತಾರೆ. ಅವರ ರೀತಿ ನಾವು ಮಾಡುವುದು ಬೇಡ ಎಂದರು.
ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳೋಣ: ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯ ನಂತರ ನಿರಂತರವಾಗಿ ನಮ್ಮ ಪಕ್ಷ ಸೋಲು ಅನುಭವಿಸುತ್ತಿದೆ. ಅದರ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ನಮಗೆ ಈಗ ಬಂದಿದೆ. ಪಂಚರತ್ನ ರಥಯಾತ್ರೆಯ ನಂತರ ವಿಧಾನಸಭೆ ಚುನಾವಣೆ ಬರಲಿದ್ದು ಈ ಬಾರಿ ಈ ಎಲ್ಲ ಚುನಾವಣೆಗಳ ಸೋಲಿನ ಮುಯ್ಯನ್ನು ತೀರಿಸಿಕೊಳ್ಳಬೇಕಿದೆ. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸುತ್ತಿವೆ. ಜೆಡಿಎಸ್ ಪಕ್ಷದ ಪ್ರಣಾಳಿಕೆಯನ್ನು ಪಂಚರತ್ನದ ಮೂಲಕ ಈಗಾಗಲೇ ರಾಜ್ಯಕ್ಕೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಮುಖಂಡ ಗೌರೀಶ್ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಯುವ ಜೆಡಿಎಸ್ ಅಧ್ಯಕ್ಷ ಪ್ರಶಾಂತ್, ಮುಖಂಡರಾದ ನಾಗೇಶ್, ಕಂಚಿನಕೋಟೆ ಮೂರ್ತಿ, ಲೋಹಿತ್ ಮತ್ತಿತರಿದ್ದರು.