ಬಾಗಲಕೋಟೆ: ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಕೂಡಲಸಂಗಮದಿಂದ ಬೆಂಗಳೂರ ವರೆಗೆ ನಡೆದ ಪಾದಯಾತ್ರೆಯಿಂದ ಈ ವರೆಗೂ ನಿರಂತರವಾಗಿ ತಮ್ಮ ಮೇಲೆ ಬರುತ್ತಿದ್ದ ಟೀಕಾಪ್ರಹಾರದ ಬಗ್ಗೆ ಮೌನ ವಹಿಸಿದ್ದ ಸಚಿವ ಮುರುಗೇಶ್ ನಿರಾಣಿ, ಇದೀಗ ಎರಡು ವರ್ಷಗಳ ಬಳಿಕ ಮೌನ ಮುರಿದು ವಿರೋಧಿಗಳ ವಿರುದ್ದ ಗುಡುಗಿದ್ದಾರೆ.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಶನಿವಾರ ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಮುರುಗೇಶ್ ನಿರಾಣಿ, ಮೊನ್ನೆ ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೊಷಣೆ ಮಾಡಲು ನಾನು ಅಡ್ಡಿಯಾಗಿದ್ದೇನೆ ಎಂದು ಸ್ಬಾಮೀಜಿ ಹೇಳಿದ್ದಾರೆ. ಇದಕ್ಕೆ ಸಾಕ್ಷಿ ಒದಗಿಸಿದರೆ ಇಂದೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಇಲ್ಲವಾದರೆ ಸ್ವಾಮೀಜಿ ಸನ್ಯಾಸತ್ವ ತೊರೆದು ರಾಜಕಾರಣಕ್ಕೆ ಬರಲಿ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ನೇರವಾಗಿ ಸವಾಲ್ ಎಸೆದಿದ್ದಾರೆ.
ಮನಸ್ಸು ಮಾಡಿದರೆ ಇಡೀ ರಾಜ್ಯದಲ್ಲಿ ಅವರನ್ನು ಸೋಲಿಸುತ್ತೇವೆ, ಇವರನ್ನು ಸೋಲಿಸುತ್ತೇವೆ ಎನ್ನುತ್ತೀರಿ. ಹಿಂದೆ ನಮ್ಮ ಸಮಾಜದ ಅನೇಕರ ಪರವಾಗಿ ಅಡ್ಡಾಡಿದ್ದೀರಲ್ಲ. ಎಷ್ಟು ಜನರನ್ನು ಗೆಲ್ಲಿಸಿದ್ದೀರಿ? ಆಗ ನಿಮ್ಮ ಶಕ್ತಿ ಏನಂತ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು.
2018 ರಲ್ಲಿ ನಿಮ್ಮ ಪೀಠ ಇರುವ ಕ್ಷೇತ್ರದಲ್ಲೆ ನಿಮ್ಮ ಎಂಎಲ್ ಎ(ವಿಜಯಾನಂದ ಕಾಶಪ್ಪನವರ) ಗೆಲ್ಲಿಸಲು ನಿಮಗೆ ಆಗಲಿಲ್ಲ. 2019 ರಲ್ಲಿ ನಿಮ್ಮ ಕ್ಷೇತ್ರದಲ್ಲಿ ಲೋಕಸಭೆಗೆ (ವೀಣಾ ಕಾಶಪ್ಪನವರ) ಗೆಲ್ಲಿಸಲು ಆಗಲಿಲ್ಲ. ಧಾರವಾಡದಲ್ಲಿ ನಮ್ಮ ಸಮಾಜದ ವಿನಯ ಕುಲಕರ್ಣಿ, 2014ರಲ್ಲಿ ಲೋಕಸಭೆ ಚುನಾವಣೆಗೆ ಬೆಳಗಾವಿ(ಲಕ್ಷ್ಮೀ ಹೆಬ್ಬಾಳ್ಕರ್) ಹಾಗೂ ಪ್ರಕಾಶ್ ಹುಕ್ಕೇರಿ ಕ್ಷೇತ್ರದಲ್ಲಿ ಹಗಲು ರಾತ್ರಿ ತಾವು ಅಡ್ಡಾಡಿದರೂ ಫಲಿತಾಂಶ ಏನಾಯ್ತು…? ಎಂದು ಖಾರವಾಗಿಯೇ ಪ್ರಶ್ನಿಸಿದರು.
ಸ್ವಾಮಿಗಳೇ ನಾವು ಸೋಲೋದು, ಗೆಲ್ಲೋದು ಮತದಾರರ ಕೈಯಲ್ಲಿದೆ. ಇವತ್ತು ಲಕ್ಷಾಂತರ ಜನರು ಸೇರುತ್ತಿದ್ದಾರೆ ಎಂದರೆ ನಮಗೆ 2ಎ ಮೀಸಲಾತಿ ಸಿಗಬೇಕು ಅಂತ. ನಿಮ್ಮ ನಡತೆ, ನಡುವಳಿಕೆ ನೋಡಿ ಅಲ್ಲ. ದೊಡ್ಡ ಸ್ಥಾನದಲ್ಲಿ ಇದ್ದೀರಿ. ಬಾಯಿ ಚಪಲಕ್ಕೆ ಯಾರ ಬಗ್ಗೆಯೂ ಮಾತನಾಡಬಾರದು. ಒಬ್ಬರ ಮನಸ್ಸಿಗೆ ಎಷ್ಟು ನೋವು ಆಗುತ್ತದೆ ಎಂದು ತಿಳಿದುಕೊಳ್ಳಬೇಕು ಎಂದು ಸ್ವಾಮೀಜಿಗೆ ಸಲಹೆ ನೀಡಿದರು.
ಮೂರು ಪೀಠ ಆಗಿವೆ, ಇನ್ನೂ ಎರಡು :
ಹೌದು, ರಾಜ್ಯದಲ್ಲಿ ಪಂಚಮಸಾಲಿ ಮೂರು ಪೀಠ ಮಾಡಿದ್ದೆ ನಾನು. ಇನ್ನೂ ಎರಡು ಪೀಠಗಳನ್ನು ಮಾಡುತ್ತೇವೆ. 80 ಲಕ್ಷ ಜನರು ಇರುವ ಪಂಚಮಸಾಲಿ ಸಮಾಜದಲ್ಲಿ ಶುಭಕಾರ್ಯಗಳಿಗೆ ಸ್ವಾಮೀಜಿಗಳು ಸಿಗಬೇಕು ಎನ್ನುವ ಕಾರಣಕ್ಕೆ ಮಾಡಲಾಗಿದೆ. ಎಲ್ಲರೂ ಅಣ್ಣ ತಮ್ಮರಾಗಿ ಒಂದೇ ಕುಟುಂಬದವರಂತೆ ನಡೆಯಬೇಕು. ಈ ರೀತಿ ಜಗಳ ಹಚ್ಚುವುದು ಆಗಬಾರದು ಎಂದರು.
2008 ರಿಂದ 2021 ರ ವರೆಗೂ ನಿಮ್ಮ ಪೀಠಕ್ಕೆ(ಕೂಡಲಸಂಗಮ ಪಂಚಮಸಾಲಿ ಪೀಠ) ಯಾರು ಹತ್ತಿರ ಇದ್ದರು? ಆಗು ಹೋಗು ಯಾರು ನೋಡಿಕೊಳ್ಳುತ್ತಿದ್ದರು? ಇದನ್ನು ನಾನು ಹೇಳಬಾರದು. ಅದು ಇಡೀ ಸಮಾಜ ಹಾಗೂ ಆರುವರೆ ಕೋಟಿ ಜನರಿಗೆ ಗೊತ್ತಿದೆ ಎಂದು ಸಚಿವ ಸಚಿವ ನಿರಾಣಿ ಹೇಳಿದರು.
ಪಂಚಮಸಾಲಿ ಸಮಾಜ ಜಾತಿ ಕಾಲಂಗೆ ತಂದಿದ್ದು ಬಿಎಸ್ ವೈ:
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಜಾತಿ ಕಾಲಂನಲ್ಲಿ ಇರಲೇ ಇಲ್ಲ. ಈ ಬಗ್ಗೆ ಯಡಿಯೂರಪ್ಪ ಸಿಎಂ ಇದ್ದಾಗ ನಾನೇ ಪ್ರಸ್ತಾವನೆ ಇಟ್ಟಿದ್ದೆ. ಆಗ ಬಿಎಸ್ ವೈ ಅವರು ನಾಲ್ವರು ಸಚಿವರು ಇದ್ದ ಕಮೀಟಿ ಮಾಡಿದ್ದು, ಬಳಿಕ ಜಾತಿ ಕಾಲಂ ಗೆ ಬಂತು. ಬಳಿಕ 2ಎ ಮೀಸಲಾತಿ ಕೊಡಿ ಎಂದು ಕೇಳಿದೇವು. ಆದರೆ, ಬಿಎಸ್ ವೈ ಬಳಿಕ ಬಂದ ಸರ್ಕಾರಗಳು ಅದನ್ನು ಮುಂದುವರೆಸಿರಲಿಲ್ಲಎಂದು ಸಚಿವ ನಿರಾಣಿ ಹಿಂದಿನ ಘಟನೆ ಮೆಲಕು ಹಾಕಿದ್ದಲ್ಲದೇ 2ಎ ಮೀಸಲಾತಿ ವಿಚಾರವಾಗಿ ಬಿಎಸ್ ವೈ ವಿರುದ್ದದ ಟೀಕಾಕಾರರಿಗೆ ತಿರುಗೇಟು ನೀಡಿದರು.