ಜಿಲ್ಲೆ

ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಸಭೆ

ವಿಜಯಪುರ:ಪಂಚಮಸಾಲಿ ಸಮಾಜದ ಬಡವರಿಗೆ ಸಹಾಯ ಹಸ್ತ ಚಾಚಲು, ಸಮಾಜದ ಒಗ್ಗೂಡುವಿಕೆ ಹಾಗೂ ಏಳಿಗೆಗಾಗಿ ಪಂಚಾಮಸಾಲಿ ಸ್ವಾಮೀಜಿಗಳ ಪ್ರತ್ಯೇಕ ಒಕ್ಕೂಟ ರಚಿಸಲಾಗಿದೆ ಎಂದು ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮೀಜಿ ಹೇಳಿದರು. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಸೋಮವಾರ ನಡೆದ ಒಕ್ಕೂಟದ ಮೂರನೇ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಎರಡೂವರೆ ವರ್ಷಗಳಿಂದಲೂ ಸಮಾನ ಮನಸ್ಕ ಸ್ವಾಮೀಜಿಗಳೆಲ್ಲರೂ ಸೇರಿ ಪಂಚಮಸಾಲಿ ಒಕ್ಕೂಟ ರಚಿಸಲು ಚಿಂತನೆ ಮಾಡಲಾಗಿತ್ತು. ತತ್ಸಂಬಂಧ ಈ ಹಿಂದೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಕ್ಕಮರಿ ಹಾಗೂ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಎರಡನೇ ಸಭೆ ನಡೆದಿದ್ದು, ಈಗ ಮೂರನೇ ಸಭೆ ನಡೆಯಿತು ಎಂದರು.

ಈಗಾಗಲೇ ಪಂಚಮಸಾಲಿ ಪೀಠಗಳ ಎರಡು ಪೀಠಗಳು ಇದ್ದು, ಅದಕ್ಕೆ ಸೆಡ್ಡು ಹೊಡೆಯಲು ಈ ಒಕ್ಕೂಟ ರಚನೆಯಾಗಿಲ್ಲ. ಸಮಾಜದ ಉದ್ದಾರವೇ ನಮ್ಮ ಮೂಲ ಧ್ಯೇಯವಾಗಿತ್ತು. ನಮಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಎರಡೂ ಪೀಠದ ಶ್ರೀಗಳು ತಾವೂ ನಮ್ಮನ್ನು ಕರೆದಿಲ್ಲ. ಹಾಗೆಯೇ ನಾವೂ ಪೀಠದ ಜಗದ್ದುರುಗಳಿಗೆ ಆಹ್ವಾನ ನೀಡಿಲ್ಲ ಎಂದರು.

ಪಂಚ ಪೀಠದ ಐದು ಪೀಠಗಳಂತೆಯೇ ಪಂಚಮಸಾಲಿಯಲ್ಲೇ ಒಂದು ಮಹಿಳಾ ಪೀಠ ಸೇರಿ ಐದು ಪೀಠಗಳು ನೇಮಕಗೊಳ್ಳಬೇಕು ಎಂಬುದು ಮಹಾಂತ ಸ್ವಾಮೀಜಿಯವರದ್ದಾಯಿತು. ಆದರೂ ನಾವಿಲ್ಲಿ ಪ್ರತ್ಯೇಕ ಪೀಠ ಮಾಡಲು ಹೊರಟಿಲ್ಲ. ಬಡವರ ಸೇವೆ ಮಾಡಲು ಸಮಾನ ಮನಸ್ಕರು ಸೇರಿಕೊಂಡು ಒಕ್ಕೂಟ ಮಾಡುತ್ತಿದ್ದೇವೆ ಎಂದರು. ಸ್ವಾಮೀಜಿಗಳ ಒಕ್ಕೂಟದ ಸಭೆಯಲ್ಲಿ ರಾಜ್ಯದ ಏಳು ಜಿಲ್ಲೆಗಳಿಂದ ಸ್ವಾಮೀಜಿಗಳು ಭಾಗವಹಿಸಿದ್ದರು.