ಸುದ್ದಿಗೋಷ್ಠಿಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಆರ್.ಕೆ. ಪಾಟೀಲ, ಗುಂಡು ಪಾಟೀಲ, ನಿಂಗಪ್ಪ ಫಿರೋಜಿ, ಆರ್.ಸಿ. ಪಾಟೀಲ, ಆರ್.ಪಿ. ಪಾಟೀಲ ಇತರರಿದ್ದರು. 
ಜಿಲ್ಲೆ

ಪಂಚಮಸಾಲಿ ಮೀಸಲಿಗಾಗಿ 18ಕ್ಕೆ ಬೆಂಗಳೂರು ಚಲೋ

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ 7ನೇ ಹಂತದ ಹೋರಾಟವಾಗಿ ಹಮ್ಮಿಕೊಂಡಿದ್ದ ವಕೀಲರ ಸಮಾವೇಶದ ವೇಳೆ ಸಿಎಂ ಸಿದ್ದರಾಮಯ್ಯ ಅ.15ರಂದು ಸಭೆ ನಡೆಸುವುದಾಗಿ ಕೊಟ್ಟಿದ್ದ ಮಾತನ್ನು ತಪ್ಪಿದ್ದಾರೆ. ಹೀಗಾಗಿ ಅ.18ರಂದು ಬೆಂಗಳೂರು ಚಲೋ ನಡೆಸಲಾಗುವುದು ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬೆಳಗಾವಿ ಕೇಂದ್ರ ಸ್ಥಾನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಚೇರಿಯಿಂದ ಈವರೆಗೂ ಯಾವುದೇ ಸಭೆಯ ಕುರಿತು ಮಾಹಿತಿ ಬಂದಿಲ್ಲ. ಮುಖ್ಯಮಂತ್ರಿಗಳೇ ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಭಾನುವಾರ ಸವದತ್ತಿಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ನಮ್ಮ ಹೋರಾಟದ ಬಗ್ಗೆ ತಂದಿದ್ದಾರೆ ಎಂದು ತಿಳಿದು ಬಂದಿದೆ. ಈವರೆಗೂ ಬೇರೆ ದಿನಾಂಕ, ಸ್ಥಳ ಮತ್ತು ಸಮಯ ನಿಗದಿಪಡಿಸಿಲ್ಲ. ಇದು ಪಂಚಮಸಾಲಿ ವಕೀಲರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂಬ ಅನುಮಾನ ಮೂಡತೊಡಗಿದೆ. ಆದ್ದರಿಂದ ಪಂಚಮಸಾಲಿ ಸಮಾಜದ ವಕೀಲರು, ಹೋರಾಟಗಾರರು ಅ.18ರಂದು ಬೆಂಗಳೂರಿಗೆ ತೆರಳಿ ವಿಧಾನಸೌಧದ ಮುಂಭಾಗದಲ್ಲಿ ಕುಳಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು. ಆ ದಿನವೂ ಸ್ಪಂದನೆ ದೊರೆಯದಿದ್ದರೆ, ಮುಂದಿನ ಉಗ್ರ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.

ಆರ್.ಕೆ. ಪಾಟೀಲ, ಗುಂಡು ಪಾಟೀಲ, ನಿಂಗಪ್ಪ ಫಿರೋಜಿ, ಆರ್.ಸಿ. ಪಾಟೀಲ, ಆರ್.ಪಿ. ಪಾಟೀಲ, ರಾಜು ಮಗದುಮ್, ಪ್ರಕಾಶ ಭಾವಿಕಟ್ಟಿ, ರಾವುನಾಹೇಬ ಪಾಟೀಲ ಇತರರು ಸುದ್ದಿಗೋಷ್ಠಿಯಲ್ಲಿದ್ದರು.