ಜಿಲ್ಲೆ

ಪಂಚನಹಳ್ಳಿ ಕೆರೆಗೆ ಬಾಗಿನ

ಪಂಚನಹಳ್ಳಿ: ಹನ್ನೆರಡು ವರ್ಷಗಳ ನಂತರ ಕೋಡಿ ಹರಿದಿರುವ ಪಂಚನಹಳ್ಳಿಯ ಕೆರೆಗೆ ಭಾನುವಾರ ಗ್ರಾಮ ಪಂಚಾಯಿತಿ ಮತ್ತು ಗ್ರಾಮ ದೇವತೆ ಶ್ರೀ ಗೆಜ್ಜೆಕಲ್ಲಮ್ಮ ದೇವಾಲಯ ಅಭಿವೃದ್ಧಿ ಸಮಿತಿಯಿಂದ ಬಾಗಿನ ಅರ್ಪಿಸಲಾಯಿತು. ಗ್ರಾಪಂ ಅಧ್ಯಕ್ಷೆ ರೂಪಾ ಶ್ರೀನಿವಾಸ್ ಮಾತನಾಡಿ, ಕೋಡಿ ದುರಸ್ತಿ ಮಾಡಲು ಹಾಗೂ ಸ್ವಚ್ಛಗೊಳಿಸಲು ಅನುದಾನ ಮೀಸಲಿಡಲಾಗುವುದು. ಮೀನುಗಾರಿಕೆಯಿಂದ ಪಂಚಾಯಿತಿ ಆದಾಯ ಕೂಡ ಹೆಚ್ಚಿದೆ ಎಂದರು.

ಸದಸ್ಯ ಪಿ.ಆರ್.ರಂಗನಾಥ್ ಮಾತನಾಡಿ, ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಮುಂಗಾರು ಬೆಳೆಗಳು ಹಾನಿಯಾಗಿ ರೈತರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಆದರೂ ಕೆರೆ-ಕಟ್ಟೆಗಳು ಭರ್ತಿಯಾಗಿರುವುದು ಅನ್ನದಾತರ ಸಂತಸಕ್ಕೂ ಕಾರಣವಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ನಷ್ಟಕ್ಕೀಡಾದವರಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಹೇಳಿದರು.