ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಂಚಗ್ಯಾರಂಟಿ ಯೋಜನೆ ಜಾರಿಗೊಳಿಸಲು ರಾಜ್ಯಸರ್ಕಾರ ಕಳೆದ ಎರಡು ವರ್ಷಗಳಿಂದ ೧೮೦೦ ಕೋಟಿ ರೂ.ಗಳನ್ನು ವ್ಯಯಿಸುವ ಮೂಲಕ ಕುಟುಂಬಗಳನ್ವನು ಆರ್ಥಿಕವಾಗಿ ಸಬಲವಾಗಿಸಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ೧೮೦೦ ಕೋಟಿ ರೂ. ಜನಸಾಮಾನ್ಯರೊಂದಿಗೆ ಓಡಾಡಿರುವುದರಿಂದ ಜಿಲ್ಲೆಯಲ್ಲಿ ಆರ್ಥಿಕ ಸಂಚಲನ ಉಂಟಾಗುವ ಜೊತೆಗೆ ಅಭಿವೃದ್ಧಿಯ ಒಂದು ಭಾಗವಾಗಿದೆ. ಇದರಿಂದ ಬಹುತೇಕ ಕುಟುಂಬಗಳು ಆರ್ಥಿಕ ಹೊರೆಯನ್ನು ಇಳಿಸಿಕೊಂಡು ನೆಮ್ಮದಿ ಜೀವನಕ್ಕೆ ರಾಜ್ಯಸರ್ಕಾರ ದಾರಿ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆ ಜಾರಿಗೊಂಡು ೨೪ ತಿಂಗಳು ಕಳೆದಿದ್ದು, ಈ ಪೈಕಿ ೨೧ತಿಂಗಳ ಕಂತುಗಳು ಮದ್ಯ ವರ್ತಿಗಳ ಹಾವಳಿಗಳಿಲ್ಲದೆ ನೇರವಾಗಿ ಖಾತೆಗೆ ಜಮೆಯಾಗಿದೆ. ಇನ್ನುಳಿದ ಕಂತುಗಳು ಹಂತ ಹಂತಗಳ ಲ್ಲಿ ಜಮೆಗೊಳ್ಳಲಿದೆ ಎಂದ ಅವರು ಮಹಿಳೆಯರು ಈ ಯೋಜನೆಯಿಂದ ಗೃಹೋಪಯೋಗಿ ವಸ್ತು ಖರೀದಿ ಮತ್ತು ಹೈನುಗಾರಿಕೆಗೆ ವಿನಿಯೋಗಿಸಿಕೊಂಡಿದ್ದಾರೆ ಎಂದರು.
ಶಕ್ತಿಯೋಜನೆಯಲ್ಲಿ ಶೃಂಗೇರಿ ಘಟಕ ಆರಂಭಗೊಂಡ ನಂತರ ಮಲೆನಾಡಿನ ಸಾರಿಗೆ ವ್ಯವಸ್ಥೆ ಸುಸ್ಥಿತಿ ಗೆ ಬರಲಿದೆ. ಅಲ್ಲಿಯವರೆಗೆ ಚಿಕ್ಕಮಗಳೂರು ಘಟಕದಿಂದಲೇ ಸಣ್ಣಪುಟ್ಟ ಲೋಪದೋಷಗಳು ಕಂಡುಬಂದಲ್ಲಿ ಪರಿಹರಿಸಲು ಮುಂದಾಗಲಿದ್ದೆದೇವೆ. ಒಟ್ಟಾರೆ ಎರಡು ವರ್ಷಗಳಲ್ಲಿ ಶಕ್ತಿಯೋಜನೆಯಡಿ ೮೪ ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಸದುಪಯೋಗಪಡಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ೨೦ ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ೮ ಕೋಟಿಗೂ ಅಧಿಕ ಮೊತ್ತದ ಹಣವನ್ನು ಪಡೆದುಕೊಂಡಿದ್ದಾರೆ. ಜೊತೆಗೆ ತರಬೇತಿ ಒದಗಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯ ಶಿಬಿರ, ಸಂವಾದ ನಡೆಸುವ ಮೂಲಕ ಉದ್ಯೋಗ ಲಭಿಸುವವರೆಗೆ ಆರ್ಥಿಕ ಶಕ್ತಿ ತುಂಬಲಾಗುತ್ತಿದೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಿಂದ ಪಡಿತರದಾರರಿಗೆ ಹೆಚ್ಚುವರಿ ೫ ಕೆಜಿ ಅಕ್ಕಿ ಬದಲಾಗಿ ಹಣವನ್ನು ಸಂದಾಯ ಮಾಡಲಾಗಿತ್ತು. ಇದೀಗ ಸಂಪೂರ್ಣ ೧೦ ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಮಲೆನಾಡು ಪ್ರದೇಶ ಹೊರತಾಗಿ ಬಯಲು ಸೀಮೆಗೆ ಅಕ್ಕಿ ಜೊತೆಗೆ ರಾಗಿ ವಿತರಿಸಲಾಗುತ್ತಿದೆ. ಮುಂದೆ ಬೇಳೆಕಾಳು, ಅಡುಗೆಎಣ್ಣೆ ಹಾಗೂ ಇಂದಿರಾ ಕಿಟ್ ಒದಗಿಸು ವ ಆಲೋಚನೆಯಿದೆ. ಜಿಲ್ಲೆಯಲ್ಲಿ ೮ ಲಕ್ಷ ಮಂದಿ ಅನ್ನಭಾಗ್ಯದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಲ್ಲಿ ೩ ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಜಿಲ್ಲೆಯಲ್ಲಿ ಸಂಪೂರ್ಣ ಉಚಿತ ವಿದ್ಯುತ್‌ನ್ನು ಪಡೆದುಕೊಂಡಿದ್ದು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಆಶಯ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಈಡೇರಿದೆ ಎಂದು ಹೇಳಿದರು.
ಜಿಪಂ ಎರಡನೇ ಉಪಕಾರ್ಯದರ್ಶಿ ಗೌರವ್‌ಶೆಟ್ಟಿ ಮಾತನಾಡಿ, ರಾಜ್ಯಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿ ವಹಿಸಬೇಕು. ಅಲ್ಲಲ್ಲಿ ಲೋಪದೋಷ ಕಂಡುಬಂದಲ್ಲಿ ಶೀಘ್ರದಲ್ಲೇ ಬಗೆಹರಿಸುವ ಅಥವಾ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಪರಿಹಾರ ಕಂಡುಕೊಂಡು ಸಾರ್ವಜನಿಕರಿಗೆ ಅನುಕೂಲ ಒದಗಿಸಿಕೊಡಲಾಗುವುದು ಎಂದರು.
ಇದೇ ವೇಳೆ ಯುವನಿಧಿ ಯೋಜನೆ ನೋಂದಾಯಿಸುವ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಶಂಕರ್‌ಕೊರವರ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾದ ಎಚ್.ಎಸ್.ಕೃಷ್ಣೇಗೌಡ, ಸಮೀವುಲ್ಲಾ ಷರೀಫ್, ಹೇಮಾವತಿ, ಬಿ.ಜಿ.ಚಂದ್ರಮೌಳಿ, ಸದಸ್ಯರಾದ ಎಂ.ಮಲ್ಲೇಶ್, ಜೇಮ್ಸ್ ಡಿಸೋಜಾ, ಜಯರಾಮೇಗೌಡ, ಚಂದ್ರಪ್ಪ ಹಾಗೂ ವಿವಿಧ ತಾಲೂಕು ಅಧ್ಯಕ್ಷರು ಉಪಸ್ಥಿತರಿದ್ದರು.