ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಭದ್ರಗಿರಿ ಶ್ರೀ ಶಿವ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಏ.11ರಂದು ನಡೆಯಲಿರುವ ಪಂಗುಣಿ ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ದೇಗುಲ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಪ್ರಾತಃ ಕಾಲ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿ ಸೇರಿ ವಿವಿಧ ದೇವರಿಗೆ ಹಾಲು, ತುಪ್ಪ, ಮೊಸರು, ಎಳನೀರು, ಜೇನುತುಪ್ಪ, ಸುಗಂಧ ದ್ರವ್ಯಾಧಿಗಳಿಂದ ಅಭಿಷೇಕ ಮಾಡಲಾಯಿತು. ದೇಗುಲದಲ್ಲಿ ಶ್ರೀ ಮರುಗೇಶ್ ಸ್ವಾಮಿ ನೇತತ್ವದಲ್ಲಿ ಗಣಹೋಮ ನೆರವೇರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಲಿಂಗದಹಳ್ಳಿ, ಹೊಸಗಂಗೂರು, ಬಳ್ಳಾವರ, ಭದ್ರಾವತಿ, ತರೀಕೆರೆ, ಕಷ್ಣಾಪುರ, ಲಕ್ಕವಳ್ಳಿ ಮತ್ತಿತರ ಕಡೆಯಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.
ದೇಗುಲದ ಆಡಳಿತ ಮಂಡಳಿ ಗೌರವಾಧ್ಯಕ್ಷ ಕರುಣಾಮೂರ್ತಿ ಮಾತನಾಡಿ, ದೇವರ ಸನ್ನಿಧಿಯಲ್ಲಿ ಡಿಸೆಂಬರ್‌ನಲ್ಲಿ ಕುಂಭಾಭಿಷೇಕ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಭಕ್ತರ ಜತೆ ಸಮುದಾಯದ ಪ್ರಮುಖರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ಎನ್.ರಾಮೇಗೌಡ, ಸದಸ್ಯೆ ಅಲುಮೇಲು, ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಸೋಮರಾಜ್, ಪ್ರಧಾನ ಕಾರ್ಯದರ್ಶಿ ಎ.ಚಂದ್ರಘೋಷನ್, ಉಪಾಧ್ಯಕ್ಷರಾದ ಬಿ.ಮಣಿ, ಸುಬ್ರಮಣಿ, ಕಾರ್ಯದರ್ಶಿ ರವಿ, ಪ್ರಮುಖರಾದ ತಿರುಮೂರ್ತಿ, ಡಾ. ವಿಕ್ರಂ, ಜೆ.ಎಂ.ಶ್ರೀನಿವಾಸ್, ಮುತ್ತುರಾಜ್, ವೆಂಕಟೇಶ್, ಪಾರ್ಥಿಬನ್, ಷಣ್ಮುಖ ಇತರರಿದ್ದರು.