ಧಾರವಾಡ: ಗಾನಪ್ರದೀಪ ಪಂ.ಬಸವರಾಜ ಗೋನಹಾಳು ಅವರ ಸ್ಮರಣಾರ್ಥ ಫೆ. 9ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ ಇಲ್ಲಿನ ಡಾ. ಅಣ್ಣಾಜಿರಾವ್ ಶಿರೂರ ರಂಗಮಂದಿರದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಆಲಾಪ ಸಂಗೀತ ಪ್ರಭಾ ವತಿಯಿಂದ ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ದಿಗ್ವಿಜಯ 247 ನ್ಯೂಸ್ ಚಾನಲ್ ಮಾಧ್ಯಮ ಸಹಯೋಗ, ಡಾ. ಅಣ್ಣಾಜಿರಾವ್ ಶಿರೂರ ರಂಗಮಂದಿರ ಹಾಗೂ ಇತರ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಜಯ ಗೋನಹಾಳು ಸಿತಾರ ವಾದನ, ನಿಸಾರ್ ಅಹ್ಮದ್ ತಬಲಾ ಸೋಲೊ, ಪ್ರಿಯಾ ಪುರುಷೋತ್ತಮ ಶಾಸ್ತ್ರೀಯ ಗಾಯನ, ವಿನಾಯಕ ಚಿಟ್ಟಾರ ಸಿತಾರ ವಾದನ ಹಾಗೂ ಪಂ.ರೋಣು ಮುಜುಮದಾರ್ ಕೊಳಲು ವಾದನ ಪ್ರಸ್ತುತಪಡಿಸಲಿದ್ದಾರೆ. ಇವರಿಗೆ ಪಂ. ರಾಜೇಂದ್ರ ನಾಕೋಡ, ವಿಕಾಸ ನರೇಗಲ್ಲ, ಪುಟ್ಟರಾಜ ಗೋನಹಾಳು ತಬಲಾ ಹಾಗೂ ಅರಣ್ಯಕುಮಾರ ಲೇಹರಾ-ಇಸ್ರಾಜ್, ಬಸವರಾಜ ಹಿರೇಮಠ ಹಾಮೋನಿಯಂ ಸಾಥ್ ನೀಡಲಿದ್ದಾರೆ.
ವಿನಾಯಕ ಗೋನಹಾಳು ಅವರ ಶಿಷ್ಯಂದಿರಾದ ಅರ್ಜುನ ಆನಂದ, ನವ್ಯಾ ರುದ್ರಪ್ಪ, ಪ್ರಣವ್ ರಾವ್, ಪ್ರತೀಕ್ಷಾ ಹೂಗಾರ ಅವರಿಂದ ಸಮೂಹ ಸಿತಾರ ವಾದನ ನಡೆಯಲಿದ್ದು, ಪ್ರಶಾಂತ ಹಾರೋಗೇರಿ ತಬಲಾ ಸಾಥ್ ನೀಡಲಿದ್ದಾರೆ.
ಪಂ. ಪುಟ್ಟರಾಜ ಗವಾಯಿಗಳ ಪ್ರೀತಿಗೆ ಪಾತ್ರರಾಗಿದ್ದ ಪಂ. ಬಸವರಾಜ ಗೋನಹಾಳು ಅವರು 1956ರಲ್ಲಿ ಬಳ್ಳಾರಿ ಜಿಲ್ಲೆ ಗೋನಹಾಳ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲಿ ಸಂಗೀತ ಕಲಿಯುವ ಹಂಬಲದಿಂದ ಗುರುವಿನ ಹುಡುಕಾಟದಲ್ಲಿದ್ದಾಗ ಸಿಡಿಗಿನ ಮಳೆ ಎಂಬ ಊರಿನಲ್ಲಿ ವೀರಭದ್ರಪ್ಪ ಬಡಿಗೇರ ಬಳಿ ಕರ್ನಾಟಕ ಸಂಗೀತದ ಪ್ರಾಥಮಿಕ ಶಿಕ್ಷಣ ಪಡೆದರು. 1966ರಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂ. ಡಾ. ಪುಟ್ಟರಾಜ ಗವಾಯಿಗಳಲ್ಲಿ ಸಂಗೀತ ಅಭ್ಯಾಸಕ್ಕೆ ಸೇರಿದರು.
ಸತತ 10 ವರ್ಷ ಸಂಗೀತ ಮತ್ತು ಗುರುಗಳ ಸೇವೆ ಮಾಡಿದ ಪಂ. ಬಸವರಾಜ, ಆಶ್ರಮದ ಮತ್ತು ಗುರುಗಳ ಪರಂಪರಾಗತ ಪದ್ಧತಿ ಕಿರಾಣಾ, ಗ್ವಾಲಿಯರ್ ಘರಾಣೆ ಶೈಲಿ ಅಭ್ಯಸಿಸಿದರು. ನಂತರ ನಾಟಕಗಳ ಮೂಲಕ ವೃತ್ತಿ ಜೀವನ ಆರಂಭಿಸಿ, ನಾಟಕಗಳಲ್ಲಿ ಸಂಗೀತ ನಿರ್ದೇಶಕ ಮತ್ತು ಹಾಡುಗಾರರಾಗಿ ಕೆಲಸ ಮಾಡಿದರು.
ಬಳಿಕ ಪ್ರಖ್ಯಾತ ನಾಟಕಕಾರ, ಸಂಗೀತ ನಿರ್ದೇಶಕ ಯೋಗಾನರಸಿಂಹಮೂರ್ತಿಯವರ ಬಳಿ ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿ ಸೇವೆ ಸಲ್ಲಿಸಿದರು. ಹೆಸರಾಂತ ಎನ್. ಬಸವರಾಜ ಗುಡಗೇರಿ, ಸುಳ್ಳದ ದೇಸಾಯಿ ಕಂಪನಿ, ವೀರೇಶ್ವರ ಕಂಪನಿಯಲ್ಲಿ ಸೇವೆ ಸಲ್ಲಿಸಿದರು.
ಮುಂಬೈ, ಗೋವಾ, ಬರೋಡಾ, ಅಹ್ಮದಾಬಾದ್, ಭೋಪಾಲ, ಬೆಂಗಳೂರು, ಮೈಸೂರು ಸೇರಿ ರಾಜ್ಯ, ಹೊರ ರಾಜ್ಯಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಅಧಿಪತಿಗಳು ಇವರಿಗೆ ಗಾನಪ್ರದೀಪ ಎಂಬ ಬಿರುದು ನೀಡಿದ್ದಾರೆ. ಪಟ್ಟದಕಲ್ಲು, ನವರಸಪುರ, ಕರಾವಳಿ, ಮೈಸೂರು ದಸರಾ ಉತ್ಸವ ಮತ್ತು ಧಾರವಾಡದ ಉಸ್ತಾದ್ ಬಾಲೇಖಾನರ ಉಸ್ತಾದ್ ರೆಹಮತಖಾನ್ ಸಂಗೀತೋತ್ಸವದಲ್ಲಿ ಭಾಗವಹಿಸಿ ಗಾನಸುಧೆ ಹರಿಸಿದ್ದಾರೆ.