ಮೈಸೂರು: ಬ್ರಾಹ್ಮಣ ಸಮುದಾಯವನ್ನು ಪ.ಮಲ್ಲೇಶ್ ಅವಹೇಳನ ಮಾಡಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಶಂಕರಮಠದ ವಿದ್ಯಾಶಂಕರ ಕಲ್ಯಾಣ ಮಂಪಟದ ಬಳಿ ಪ್ರತಿಭಟನಾಕಾರರು ಜಮಾವಣೆಗೊಂಡರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡರು. ಮಹಾರಾಣಿ ಕಾಲೇಜಿನ ಪಕ್ಕದಲ್ಲಿರುವ ರಸ್ತೆಯಲ್ಲಿ ಸಂಚಾರ ಬಂದ್ ಮಾಡಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನ.15ರಂದು ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ ಪ.ಮಲ್ಲೇಶ್ ಅವರು ‘ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣರ ಆಚರಣೆಯನ್ನು ನಂಬಬೇಡಿ. ವೇದಗಳು-ಉಪನಿಷತ್ತುಗಳು ಈ ದೇಶವನ್ನು ಹಾಳು ಮಾಡುತ್ತಿವೆ’ ಎಂದು ಹೇಳುವ ಮೂಲಕ ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೇಲ್ವರ್ಗದ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದನ್ನೂ ಮಲ್ಲೇಶ್ ಅವರು ತಪ್ಪೆಂದು ವಿರೋಧಿಸಿದ್ದಾರೆ. ಇದು ನ್ಯಾಯಾಂಗ ನಿಂದನೆ ಮಾಡಿದಂತಾಗಿದೆ. ಈ ರೀತಿ ವರ್ತನೆಯಿಂದ ಸಮುದಾಯ ತುಂಬ ಮನನೊಂದಿದೆ. ಇವರ ವರ್ತನೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲೇಶ್ ಹೇಳಿಕೆ ವಿರುದ್ಧ ಈಗಾಗಲೇ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ, ನೆಮ್ಮದಿಯನ್ನು ದುರುದ್ದೇಶಪೂರ್ವಕವಾಗಿ ಕದಡಿರುವ ಅವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಎಂಎಲ್ಸಿ ಗೋ.ಮಧುಸೂದನ್, ಪಾಲಿಕೆ ಸದಸ್ಯ ಮಾ.ವಿ.ರಾಮ್‌ಪ್ರಸಾದ್, ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮುಖಂಡರಾದ ಭಾನುಪ್ರಕಾಶ್ ಶರ್ಮ, ಬಿ.ಆರ್.ನಟರಾಜ್ ಜೋಯಿಸ್, ಡಾ.ಲಕ್ಷ್ಮೀ, ಎಂ.ಸಿ.ರಮೇಶ್, ಜಿ.ಆರ್.ನಾಗರಾಜ್, ಗೋಪಾಲ್‌ರಾವ್ ಇನ್ನಿತರರು ಪಾಲ್ಗೊಂಡಿದ್ದರು.