ಜಿಲ್ಲೆ

ನ್ಯಾಯಾಲಯದ ಮೊರೆ ಹೋದ ನಿವೃತ್ತ ನೌಕರರು

ಚಾಮರಾಜನಗರ: ಜುಲೈ 2022 ರಿಂದ ಜುಲೈ 2024 ರ ಅವಧಿಯಲ್ಲಿ ನಿವೃತ್ತಿ ಹೊಂದಿದ ಎಲ್ಲಾ ಇಲಾಖೆಗಳ ನೌಕರರು ಶನಿವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಭೆ ನಡೆಸಿ ನ್ಯಾಯಯುತ ಸವಲತ್ತುಗಳನ್ನು ಪಡೆದುಕೊಳ್ಳಲು ನ್ಯಾಯಾಲಯದ ಮೊರೆಹೋಗಲು ನಿರ್ಧರಿಸಿದ್ದಾರೆ.

ಸಂಘಟನೆಯ ಜಿಲ್ಲಾ ಸಂಚಾಲಕ ಎ.ಶಿವಣ್ಣ ಹಾಗೂ ಕೆ.ಎನ್.ಶಿವಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಿದ ಸದಸ್ಯರು ಏಳನೇ ವೇತನ ಆಯೋಗದ ಅನುಸಾರ ಡಿಸಿಆರ್‌ಜಿ ಹಾಗೂ ಕಮ್ಯುಟೇಷನ್ ಸೌಲಭ್ಯ ನೀಡದೆ 6ನೇ ವೇತನ ಆಯೋಗದ ಅನುಸಾರ ನೀಡಿದ್ದರಿಂದ ನಮಗೆಲ್ಲ ಆರ್ಥಿಕ ನಷ್ಟ ಉಂಟಾಗಿದೆ. ಈ ನಿಟ್ಟಿನಲ್ಲಿ ಸಂತ್ರಸ್ಥ ನೌಕರರು ಕೈತಪ್ಪಿಹೋಗಿರುವ ಸೌಲಭ್ಯಗಳನ್ನು ಪಡೆಯಲು 10ತಿಂಗಳಿನಿಅದ ಹಲವಾರು ರೀತಿಯ ಹೋರಾಟವನ್ನು ನಡೆಸಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಆದ್ದರಿಂದ ಉಚ್ಚನ್ಯಾಯಾಲಯ ಹಾಗೂ ಕರ್ನಾಟಕ ಆಡಳಿತ ಮಂಡಳಿಯ ಮೊರೆ ಹೋಗಲು ನಿರ್ಧರಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮತ್ತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ನೋಂದಣಿ ಅಂಚೆ ಮೂಲಕ ಪತ್ರವನ್ನು ರವಾನಿಸಲಾಗುವುದು. ಯಾವುದೇ ಪ್ರತಿಕ್ರಿಯೆ ಬರದಿದ್ದರೆ ನಂತರ ನ್ಯಾಯಲಯದ ಮೊರೆ ಹೋಗುವಂತೆ ತೀರ್ಮಾನ ಕೈಗೊಂಡರು.