ಅರಕಲಗೂಡು: ವಿಚ್ಚೇದನಕ್ಕೆ ಮುಂದಾಗಿ ಕಳೆದ 4 ವರ್ಷಗಳಿಂದ ದೂರವಿದ್ದ ದಂಪತಿಗೆ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಕೆ. ನಾಗೇಶ್ ಮೂರ್ತಿ ಸಂಧಾನದ ಮೂಲಕ ಆ ದಂಪತಿಗೆ ನ್ಯಾಯಾಲಯದಲ್ಲಿಯೇ ಮರುಮದುವೆ ಮಾಡಿಸಿದರು.
ಶನಿವಾರ ಅರಕಲಗೂಡಿನ ಜನತಾ ನ್ಯಾಯಾಲಯದಲ್ಲಿ ತಾಲೂಕಿನ ಸರಗೂರು ಗ್ರಾಮದ ನರಸಿಂಹಮೂರ್ತಿ ಮತ್ತು ವಿಜಯ ಕುಮಾರಿ ಅವರು ಕುಟುಂಬ ಕಲಹದಿಂದ 2020ರಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸುತ್ತಿದ್ದ ನಾಯಧೀಶರಾದ ನಾಗೇಶ್‌ಮೂರ್ತಿ ಅವರು ದಂಪತಿ ಹಾಗೂ ಅವರ ಸಂಬಂಧಿಕರು ಮತ್ತು ವಕೀಲರೊಂದಿಗೆ ಸಮಾಲೋಚಿಸಿ ಚರ್ಚಿಸಿ ಸಂಧಾನ ಮಾಡುವ ಮೂಲಕ ದಂಪತಿ ವಿಚ್ಚೇದನಕ್ಕೆ ನೀಡಿದ ಅರ್ಜಿಯನ್ನ ಹಿಂಪಡೆದರು.
ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಜೀವನ ಸಾಗಿಸುವುದಾಗಿ ದಂಪತಿ ಒಪ್ಪಿದ ಕಾರಣ ನ್ಯಾಯಾಧೀಶರು ನ್ಯಾಯಾಲಯದ ಕೊಠಡಿಯಲ್ಲೇ ದಂಪತಿಗೆ ಹಾರ ಬದಲಾಯಿಸಿಕೊಳ್ಳುವ ಮೂಲಕ ಮರುಮದುವೆ ಮಾಡಿಸಿದರು. ಇಂತಹ ಘಟನೆ ಅರಕಲಗೂಡು ನ್ಯಾಯಾಲಯದಲ್ಲಿ ಇದೇ ಮೊದಲ ಬಾರಿಗೆ ನಡೆದಿರುವುದು ಹರ್ಷದಾಯಕ ಎಂದು ವಕೀಲರು ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ನ್ಯಾ.ಬಿ.ಕೆ. ನಾಗೇಶ್ ಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದ್ದು, ವಿಚ್ಚೇದನ ಪಡೆಯುವವರ ಸಂಖ್ಯೆಯೂ ಅಧಿಕವಾಗುತ್ತಿರುವುದು ಬೇಸರದ ಸಂಗತಿ. ಉತ್ತಮ ಹೊಂದಾಣಿಕ ಗಂಡ-ಹೆಂಡತಿ ಇಬ್ಬರಲ್ಲೂ ಇದ್ದರೆ ಅವರ ಜೀವನ ಸಮೃದ್ಧಿಯಾಗಿರುತ್ತದೆ. ಸಣ್ಣ-ಪುಟ್ಟ ವ್ಯಾಜ್ಯಗಳಿಂದ ಜಗಳ ಮಾಡಿಕೊಂಡು ಮನಸ್ಸು ಕೆಡಿಸಿಕೊಳ್ಳುವ ಬದಲು ಎಲ್ಲರೂ ಹೊಂದಾಣಿಕೆಯ ಜೀವನ ನಡೆಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂಬುದಕ್ಕೆ ವಿಚ್ಚೇದನಕ್ಕೆ ಮುಂದಾಗಿ ಈಗ ಒಂದಾಗಿರುವ ಈ ದಂಪತಿ ಪ್ರಕರಣ ಒಂದು ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಚ್.ಎಸ್. ರೇವಣ್ಣ, ಶಂಕರಯ್ಯ, ಬೀರೇಶ್, ಮಧುಸೂದನ್, ಜಯಕೃಷ್ಣ ಹಾಗೂ ಎಚ್.ಜೆ. ಪ್ರಕಾಶ್ ಉಪಸ್ಥಿತರಿದ್ದರು.