ಅರಕಲಗೂಡು ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಭಬನದ ಕಟ್ಟಡವನ್ನು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಶನಿವಾರ ಉದ್ಘಾಟಿಸಿದರು. ಕೆ. ಗೋಪಾಲಯ್ಯ, ಎಸ್. ಅಬ್ದುಲ್ ನಜೀರ್, ಆರ್. ದೇವದಾಸ್ ಇತರರಿದ್ದರು. 
ಜಿಲ್ಲೆ

ನ್ಯಾಯಾಂಗದ ಜವಾಬ್ದಾರಿ ಮಹತ್ವದ್ದು

Hassan

ಅರಕಲಗೂಡು: ಎಲ್ಲರಿಗೂ ನ್ಯಾಯ ದೊರಕಿಸಿಕೊಡಬೇಕಾದ ಮಹತ್ವದ ಜವಾಬ್ದಾರಿ ನ್ಯಾಯಾಂಗದ ಮೇಲಿದ್ದು, ಸಮಾಜದಲ್ಲಿ ಅದರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಭವನದ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಬಾರ್ ಅಸೋಸಿಯೇಷನ್ ನ್ಯಾಯಾಂಗದ ಪ್ರಮುಖ ಭಾಗವಾಗಿದ್ದು, ಸಾರ್ವಜನಿಕರಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಯುವ ವಕೀಲರ ಸಮೂಹ ಶ್ರದ್ಧೆ, ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಸಾಧಿಸುವ ಛಲ ಇದ್ದಾಗ ಅಸಾಧ್ಯವಾದದ್ದು ಯಾವುದೂ ಇಲ್ಲ, ದೇಶವನ್ನು ಯುವಜನರು ಮುನ್ನೆಡಸಬೇಕಾಗಿದ್ದು, ನಿಮ್ಮ ಜವಾಬ್ದಾರಿ ಅರಿತು ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಭವನವನ್ನು ವಕೀಲ ಸಮೂಹ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಮಾತನಾಡಿ, ಸಮಾಜದಲ್ಲಿ ವಕೀಲರ ಮೇಲೆ ಮಹತ್ತರ ಜವಾಬ್ದಾರಿ ಇದ್ದು, ನ್ಯಾಯಕೋರಿ ಬರುವ ಕಕ್ಷಿದಾರರಿಗೆ ಶೀಘ್ರ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಭವನಕ್ಕೆ 25 ಲಕ್ಷ ರೂ. ವೆಚ್ಚದಲ್ಲಿ ಅಗತ್ಯ ಪೀಠೋಪಕರಣಗಳನ್ನು ಒದಗಿಸಲು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಹಣ ಬಿಡುಗಡೆ ಮಾಡಿಸಿಕೊಡುವುದಾಗಿ ಹೇಳಿದರು.

ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಆರ್. ದೇವದಾಸ್, ಕೆ. ಸೋಮಶೇಖರ್, ಎಚ್.ಪಿ.ಸಂದೇಶ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್. ವಿಶಾಲ್ ರಘು ಮಾತನಾಡಿದರು. ಹೈಕೋರ್ಟ್ ರಿಜಿಸ್ಟ್ರಾರ್ ಭರತ್ ಕುಮಾರ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಲ್. ವಿಜಯಲಕ್ಷ್ಮೀ ದೇವಿ, ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾದ ಮುಜಾಫರ್ ಎ.ಮಾಂಜರಿ, ಚೇತನಾ, ಎಂ.ರಘು, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಅರುಣ್ ಕುಮಾರ್, ಕಾರ್ಯದರ್ಶಿ ಎಂ.ಕೆ. ದೇವರಾಜ್, ಖಜಾಂಚಿ ಮಹಮದ್ ಇರ್ಷಾದ್, ಲೋಕೋಪಯೋಗಿ ಇಲಾಖೆ ಹಾಸನ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಸಿ.ಎಸ್. ಮಂಜು, ವಕೀಲರಾದ ರಾಜೇಶ್, ಎ.ಆರ್. ಜನಾರ್ದನ ಗುಪ್ತ ಉಪಸ್ಥಿತರಿದ್ದರು.