ಜಿಲ್ಲೆ

ನ್ಯಾಯಾಂಗ ತನಿಖೆ ನಡೆಸಿದ್ರೆ ಸತ್ಯ ಹೊರಕ್ಕೆ

ಚಿತ್ರದುರ್ಗ: ಕವಾಡಿಗರಹಟ್ಟಿ ದಲಿತ ಕಾಲನಿ ಪ್ರಕರಣ ಸಂಬಂಧ ಗೊಂದಲ ಸೃಷ್ಟಿಯಾಗಿದ್ದು, ನ್ಯಾಯಾಂಗ ತನಿಖೆಯಾಗದ ಹೊರತು ಸತ್ಯ ಹೊರಬರದು. ನ್ಯಾಯ ಸಿಗುವವರೆಗೂ ದಲಿತ ಸಂಘಟನೆಗಳ ಹೋರಾಟಕ್ಕೆ ಬಿಜೆಪಿಯ ಸಂಪೂರ್ಣ ಬೆಂಬಲ ಇರಲಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.


ಕವಾಡಿಗರಹಟ್ಟಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೃತ ಕುಟುಂಬದವರು ಹಾಗೂ ಜನರ ಅಭಿಪ್ರಾಯ ವಿಷ ಬೆರೆಸಲಾಗಿದೆ ಎಂಬುದಾಗಿದೆ. ನೀರಿನಲ್ಲಿ ಬ್ಯಾಕ್ಟೀರಿಯಾ ಕಂಡುಬಂದಿದ್ದು, ಕಾಲರಾವೆಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಉನ್ನತ ಮಟ್ಟದ ತನಿಖೆಯಾಗಲೇಬೇಕು ಎಂದು ಒತ್ತಾಯಿಸಿದರು.


ಸಾವಿಗೆ ಕಾರಣ ಏನೇ ಇರಲಿ, ಎಂಟು ಮಂದಿ ಮೃತಪಟ್ಟು 250ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರೂ ಸಿಎಂ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಕವಾಡಿಗರಹಟ್ಟಿಗೆ ಏಕೆ ಬಂದಿಲ್ಲವೆಂದು ಪ್ರಶ್ನಿಸಿದ ಮಹೇಶ್, ಖುದ್ದ್ದು ಸ್ಥಳ ಪರಿಶೀಲಿಸಿದಾಗ ಮಾತ್ರ ಇಲ್ಲಿಯ ವಾಸ್ತವ ಚಿತ್ರಣ ಅರಿವಿಗೆ ಬರುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಒಮ್ಮೆ ಭೇಟಿ ನೀಡಿ ನೊಂದವರಿಗೆ ನ್ಯಾಯ ಕೊಡಿಸಲೇಬೇಕು ಎಂದು ಆಗ್ರಹಿಸಿದರು.


ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ, ಮೈಕ್ರೋ ಫೈನಾನ್ಸ್‌ಗಳಿಂದ ಇಲ್ಲಿನ ಜನ ತೆಗೆದುಕೊಂಡ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಹಟ್ಟಿಯಲ್ಲಿ ಮೂಲಸೌಕರ್ಯ ಬಹಳ ಕೆಟ್ಟದಾಗಿದೆ. ವಿಶೇಷ ಘಟಕ ಯೋಜನೆಯಡಿ 34 ಸಾವಿರ ಕೋಟಿ ರೂ. ಇದೆ. ಅದರಿಂದ ಮೂಲಸೌಕರ್ಯಕ್ಕೆ 50 ಕೋಟಿ ರೂ. ಬಿಡುಗಡೆಗೊಳಿಸುವುದು ದೊಡ್ಡ ವಿಚಾರವಲ್ಲ ಎಂದು ಹೇಳಿದರು.


ಕಾಲನಿಯಲ್ಲಿ ಶೌಚಗೃಹಗಳಿಲ್ಲ, ಹೆಂಚಿನ ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಬಯಲುಶೌಚದಿಂದ ಅಪಾಯ ತಪ್ಪಿದ್ದಲ್ಲವೆಂದು ಆರೋಗ್ಯ ಇಲಾಖೆಯೇ ಹೇಳುತ್ತಿದೆ. ಹೀಗಿದ್ದರೂ ಕೇವಲ 4 ಕೋಟಿ ರೂ. ಅನುದಾನದ ಭರವಸೆಯಿಂದ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ ಎಂದು ಕಿಡಿಕಾರಿದರು.


ದಲಿತ ಸಮುದಾಯದವರಿಂದಲೂ ಹೆಚ್ಚು ಮತ ಪಡೆದು ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ಈಗ ಕಡೆಗಣಿಸುತ್ತಿರುವುದಕ್ಕೆ ಈ ಘಟನೆಯೇ ಸಾಕ್ಷಿ. ಕಾಲನಿಯಲ್ಲಿ ಹಲವರು ನಿರ್ಮಿಸಿಕೊಂಡಿರುವ ಮನೆಗಳಿಗೆ ದಾಖಲೆಗಳಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ವಾಧೀನ ಪಡಿಸಿಕೊಂಡರೆ, ಪರಿಹಾರ ಸಿಗದು. ಹೀಗಾಗಿ ತ್ವರಿತವಾಗಿ ಹಕ್ಕುಪತ್ರ ನೀಡುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಸಮಿತಿ ಸದಸ್ಯೆ ಭಾರ್ಗವಿ ದ್ರಾವಿಡ್, ಕರುನಾಡ ವಿಜಯಸೇನೆ ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವೀಣಾ ಗೌರಣ್ಣ, ದಸಂಸ ಅಧ್ಯಕ್ಷ ಮಂಜುನಾಥ್ ಎಸ್.ತಾಳಿಕೆರೆ, ತಿಪ್ಪೇಸ್ವಾಮಿ, ಬಾಂಡ್ ರವಿ ಇತರರಿದ್ದರು.