ಜಿಲ್ಲೆ

ನ್ಯಾಯಸಮ್ಮತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Hassan - Ramesh H R

ಹಾಸನ: ಸಮಸ್ತ ಪೌರ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದಿಂದ ತಮಟೆ ಚಳವಳಿ ಜತೆಗೆ ತೋಳಿಗೆ ಕಪ್ಪು ಪಟ್ಟಿ ಧರಿಸಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿತು. ಇದೆ ವೇಳೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಘಟನೆಯ ಹಾಸನ ಶಾಖೆ ಮತ್ತು ಜಿಲ್ಲಾ ಶಾಖೆ ವತಿಯಿಂದ ರಾಜ್ಯದ ಸಮಸ್ತ ಪೌರ ನೌಕರರ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಮಟೆ ಚಳವಳಿ ಮತ್ತು ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ನಮ್ಮ ಪ್ರಮುಖವಾದ ನ್ಯಾಯಸಮ್ಮತ ಬೇಡಿಕೆಗಳಾದ ರಾಜ್ಯ ನಗರ ಸ್ಥಳೀಯ ಸಂಸ್ಥೆಯ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕೆಜಿಐಡಿ, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ನಮಗೂ ವಿಸ್ತರಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಒಳಚರಂಡಿ ವಿಭಾಗದ ನೌಕರರು, ಬೀದಿ ದೀಪ ಸಹಾಯಕರು, ಲೋಡರ್ಸ್, ಪಾರ್ಕ್ ಗಾರ್ಡನರ್, ಸ್ಯಾನಿಟರಿ ಸೂಪರ್ ವೈಸರ್, ಡಾಟಾ ಎಂಟ್ರಿ ಆಪರೇಟರ್ಸ್, ವಾಹನ ಸಹಾಯಕರು ಇವರರನ್ನು ನೇರ ಪಾವತಿ ಯೋಜನೆಯಡಿ ತರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಶಾಖಾ ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ರಮೇಶ್, ಸಂಘಟನಾ ಕಾರ್ಯದರ್ಶಿ ಪರಶುರಾಮು ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.