ಜಿಲ್ಲೆ

ನ್ಯಾಯಸಮ್ಮತ ಚುನಾವಣೆ ನಡೆಸಲು ಸಲಹೆ- ಸೂಚನೆ

ಹಾಸನ : ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದಿಂದ ನಿಯೋಜನೆಗೊಂಡು ಜಿಲ್ಲೆಗೆ ಆಗಮಿಸಿರುವ ಸಾಮಾನ್ಯ ಹಾಗೂ ವೆಚ್ಚ ವೀಕ್ಷಕರು ಬುಧವಾರ ಉನ್ನತ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸಮಿತಿಗಳ ಸಭೆ ನಡೆಸಿ ಮುಕ್ತ ನ್ಯಾಯ ಸಮ್ಮತ ಚುನಾವಣೆ ನಡೆಸುವ ಕುರಿತು ಹಲವು ಸಲಹೆ, ಸೂಚನೆಗಳನ್ನು ನೀಡಿದರು.

ಚುನಾವಣಾ ವೀಕ್ಷಕ ಅಧಿಕಾರಿಗಳಾದ ಸಂಜೀವ್ ಕುಮಾರ್, ಅಶೋಕ್ ಕುಮಾರ್, ಪುನೀತ್ ಗೋಯಲ್, ಬಾಲಾಜಿ ದಿಗಂಬರ್ ಮಂಜುಳೆ, ಪೊಲೀಸ್ ವೀಕ್ಷಕರಾದ ಬೀಮಲ್ ಗುಪ್ತ , ಚುನಾವಣಾ ವೆಚ್ಚ ವೀಕ್ಷಕ ಅಧಿಕಾರಿಗಳಾದ ಡಾ.ನಿಖಿಲ್ ಕುಮಾರ್ ಸಿಂಗ್, ಡಾ, ಕಾರ್ತಿಕೇಯನ್ ಪಾಂಡ್ಯ, ಮದನ್ ಮೋಹನ್ ಮೀನಾ, ಎಂ.ವಿ ಸಿಂಗ್, ಜಿಲ್ಲಾ ನೋಡಲ್ ಅಧಿಕಾರಿ, ಆದಾಯ ತೆರಿಗೆ ಇಲಾಖೆಯ ಎ.ಡಿ.ಐ.ಟಿ ಚರುಮಾಮಿಲ ವಿನಯ್ ಕೆ.ಚೌದರಿ ಇವರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಯಾವುದೇ ಲೋಪ ಇಲ್ಲದಂತೆ ಅಧಿಕಾರಿಗಳು ಪರಸ್ಪರ ಸಹಕಾರ ಸಮನ್ವಯತೆಯಿಂದ ಕೆಲಸ ಮಾಡಿ ಮತಗಟ್ಟೆ ಹಂತದಲ್ಲಿ ಯಾವುದೇ ಸಮಸ್ಯೆಗಳು ಇಲ್ಲದಿರುವುದನ್ನು ಖಾತರಿ ಪಡಿಸಿಕೊಳ್ಳಿ ಎಂದು ವೀಕ್ಷಕರು ಸೂಚಿಸಿದರು.

ಮತಯಂತ್ರಗಳ ಸಾಗಣೆಗೆ ವ್ಯವಸ್ಥಿತ ಯೋಜನೆ ರೂಪಿಸಿ. ಎಫ್‌ಎಸ್‌ಟಿ, ಎಸ್‌ಎಸ್‌ಟಿ ತಂಡಗಳು ದಿನದ 24 ಗಂಟೆ ಕೆಲಸ ಮಾಡಬೇಕಿದೆ. ಎಲ್ಲಾ ತಂಡಗಳಿಗೆ ಸೂಕ್ತ ತರಬೇತಿ ನೀಡಿ ಅಗತ್ಯ ಸೌಲಭ್ಯ ಒದಗಿಸಿ. ಸ್ವೀಪ್ ಚಟುವಟಿಕೆಗಳನ್ನು ಹೆಚ್ಚಿಸಿ, ಮತದಾರರಲ್ಲಿ ಜಾಗೃತಿ ಮೂಡಿಸಿ ಎಂದರು.

ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳು ತಮ್ಮ ಚುನಾವಣಾ ವೀಕ್ಷಕರನ್ನು ಭೇಟಿ ಮಾಡಿ ದೂರು, ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ವೀಕ್ಷಕರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್.ಅರ್ಚನಾ ಅವರು ಈವರೆಗಿನ ತೆಗೆದುಕೊಂಡಿರುವ ಕ್ರಮ, ದಾಖಲಾದ ಪ್ರಕರಣಗಳು ಹಾಗೂ ಹಣ, ಮದ್ಯ, ಸಾಮಗ್ರಿ ವಶದ ಬಗ್ಗೆ ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮಾಡಿಕೊಂಡಿರುವ ವ್ಯವಸ್ಥೆ, ಸೂಕ್ಷ ಅತೀ ಸೂಕ್ಷ್ಮ ಪ್ರದೇಶದಲ್ಲಿ ಸಿಬ್ಬಂದಿ ನಿಯೋಜನೆ, ಬಂದೂಕು ಜಮಾವಣೆ, ಚೆಕ್ ಪೋಸ್ಟ್‌ಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಮತದಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿ ತಫಜುಲ್ ಹುಸೇನ್, ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಹಾಜರಿದ್ದರು.