ಚಿಕ್ಕಮಗಳೂರು: ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವ ವಕೀಲರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಮೂಲಕ ರಾಷ್ಟçಪತಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸಂಚಾಲಕ ಎನ್.ವೆಂಕಟೇಶ್, ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತು ನ್ಯಾಯಾಧೀಶರಿಗೆ ದೇಶದ ಪ್ರತಿಯೊಬ್ಬ ನಾಗರಿಕರು ಗೌರವಿಸಬೇಕು. ಆದರೆ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಗವಾಯಿ ಅವರು ಕಲಾಪ ನಡೆಸುತ್ತಿರುವಾಗ ವಿಕೃತ ಮನಸ್ಸಿನ ಮನುವಾದಿ ವಕೀಲ ಪಾದರಕ್ಷೆ ಎಸೆದು ಸಂವಿಧಾನಕ್ಕೆ ಅಗೌರವ ಸಲ್ಲಿಸಿದ್ದಾರೆ ಎಂದು ದೂರಿದರು.
ಇಂತಹ ದುಶ್ಕೃತ್ಯವೆಸಗಿರುವ ಯಾವುದೇ ವ್ಯಕ್ತಿಯಾಗಿರಲೀ ಆತ ದೇಶದ್ರೋಹಿಯಾಗುತ್ತಾನೆ. ಆದ್ದರಿಂದ ಆರೋಪಿ ವಕೀಲನನ್ನು ದೇಶದ್ರೋಹಿ ಎಂದು ಪರಿಗಣಿಸಿ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಎನ್‌ಸಿಪಿ ಪಕ್ಷದ ಜಿಲ್ಲಾಧ್ಯಕ್ಷ ವಿನೋದ್ ಕುಮಾರ್, ಜಿಲ್ಲಾ ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ಡಿ.ರಾಜು, ಡಿಎಸ್‌ಎಸ್ ಮುಖಂಡರಾದ ಕಮಲಮ್ಮ, ರಾಘವೇಂದ್ರ, ಪ್ರಸಾದ್, ಚಂಚಲಯ್ಯ ಮತ್ತಿತರರು ಉಪಸ್ಥಿತರಿದ್ದರು.