ಜಿಲ್ಲೆ

ನ್ಯಾಯಬೆಲೆ ಅಂಗಡಿ ಉದ್ಘಾಟನೆ

ಹನಗೋಡು: ಹೋಬಳಿಯ ವಡ್ಡಂಬಾಳು ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಉಪ ಕೇಂದ್ರವನ್ನು ಶಾಸಕ ಎಚ್.ಪಿ.ಮಂಜುನಾಥ್ ಗುರುವಾರ ಉದ್ಘಾಟಿಸಿದರು.
ವಡ್ಡಂಬಾಳು ಜನರ ಬಹುದಿನದ ಬೇಡಿಕೆಯಂತೆ ಪಡಿತರ ವಿತರಣೆ ಕೇಂದ್ರ ತೆರೆಯಲಾಗಿದೆ. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದು ಕರೊನಾ ಸಮಯದಲ್ಲಿ ಜನತೆಯನ್ನು ಅನ್ನಭಾಗ್ಯ ಯೋಜನೆ ಕಾಪಾಡಿದೆ. ಇಂತಹ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಹೆಗ್ಗಂದೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರವಿನಾಯಕ ಮಾತನಾಡಿ, ಹಲವು ವರ್ಷಗಳಿಂದ ಪಡಿತರಕ್ಕಾಗಿ ಗ್ರಾಮದ ಕೂಲಿ ಕಾರ್ಮಿಕರು ಒಂದು ದಿನ ಕೂಲಿ ಕೆಲಸ ಬಿಟ್ಟು ಹೆಗ್ಗಂದೂರಿನ ಸೊಸೈಟಿಗೆ ಹೋಗಬೇಕಾಗಿತ್ತು. ಮಳೆಗಾಲದಲ್ಲಿ ಸಮಸ್ಯೆ ಹೇಳತೀರದು. ಇದಲ್ಲದೆ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ವಿಳಂಬವಾಗುತ್ತಿತ್ತು. ಶಾಸಕ ಮಂಜುನಾಥ್ ಅವರ ಬಳಿ ಸಮಸ್ಯೆಗಳನ್ನು ತಿಳಿಸಿದಾಗ ಅವರು ನಮ್ಮ ಗ್ರಾಮದಲ್ಲೇ ನ್ಯಾಯಬೆಲೆ ಅಂಗಡಿ ತೆರೆದಿದ್ದಾರೆ ಎಂದು ಹೇಳಿದರು.
ಹೆಗ್ಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಯ. ಪ್ರೇಮ್ ಕುಮಾರ್, ನವೀನ್ ಕುಮಾರ್, ಚಂದ್ರಕಾಂತ್ ಇತರರು ಇದ್ದರು.