ಮೈಸೂರು: ಮಂಜೂರಾಗಿರುವ ನಿವೇಶನ ಕೊಡಿಸಿ, ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ನುಗ್ಗಹಳ್ಳಿಕೊಪ್ಪಲಿನ ಕಮಲಮ್ಮ ಕುಟುಂಬದ ಸದಸ್ಯರು ನಾಗರಿಕ ಹಕ್ಕು ರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಮಲಮ್ಮ ಅವರಿಗೆ ನಿವೇಶನ ಮಂಜೂರಾಗಿ ಹಕ್ಕುಪತ್ರ ನೀಡಲಾಗಿದೆ. ಅಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆದರೆ, ನಿವೇಶನದ ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಅಕ್ರಮವಾಗಿ ಎಂ.ನಿಂಗೇಗೌಡ ಎಂಬುವರ ಹೆಸರು ಸೇರಿಸಿ ಗೊಂದಲ ಉಂಟುಮಾಡಲಾಗಿದೆ. ಹೀಗಾಗಿ, ಈ ಕುರಿತು ತನಿಖೆ ನಡೆಸಿ ನಿಜವಾದ ಫಲಾನುಭವಿ ಕಮಲಮ್ಮ ಎಂಬುದನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಗೋವಿಂದರಾಜು, ಬಿ.ತಾರಾ, ಕೃಷ್ಣಮೂರ್ತಿ, ಶಶಿಕಲಾ, ಪಾರ್ವತಮ್ಮ, ಬಬಿತಾ, ಸುಶೀಲಮ್ಮ, ಇಂದ್ರಮ್ಮ, ಸ್ವಾಮಿ, ಪುಟ್ಟಮಾದಯ್ಯ, ಸತೀಶ, ರಾಜಮ್ಮ, ಭಾಗ್ಯಮ್ಮ, ರೇವಮ್ಮ ಸೇರಿದಂತೆ ಇನ್ನಿತರರಿದ್ದರು