ಜಿಲ್ಲೆ

ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು

ಕೊಡೇಕಲ್: ಬಪ್ಪರಗಿ ಗ್ರಾಮದ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಜಾಮೀನು ರಹಿತ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಬಹಿಷ್ಕಾರ ಹಾಕಿದವರನ್ನು ಬಂಧಿಸುವವರೆಗೆ ಈ ಹೋರಾಟ ನಿಲ್ಲದು ಎಂದು ಮಾದಿಗ ದಂಡೋರ ಮೀಸಲಾತಿ ಸಮಿತಿ(ಎಂಆರ್‌ಪಿಎಸ್)ನ ಅಧ್ಯಕ್ಷ ಪಿ.ನರಸಪ್ಪ ದಂಡೋರ ಎಚ್ಚರಿಕೆ ನೀಡಿದರು.

ಹುಣಸಗಿ ತಾಲೂಕಿನ ಬಪ್ಪಗರಗಿ ಘಟನೆ ಖಂಡಿಸಿ ಸೋಮವಾರ ಮಾದಿಗ ದಂಡೋರ ಮೀಸಲಾತಿ ಸಮಿತಿ ಕೊಡೇಕಲ್‌ನಿಂದ ಬಪ್ಪರಗಿ ಗ್ರಾಮದವರೆಗೆ ಹಮ್ಮಿಕೊಂಡ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ. ಗ್ರಾಮದಲ್ಲಿ ನಡೆದಿರುವ ಅಮಾನವೀಯ ಘಟನೆ ನಿಜಕ್ಕೂ ಶೋಷಿತರ ಮೇಲೆ ನಡೆದಿರುವ ದೌರ್ಜನ್ಯ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿರುವ ಕೇವಲ ಬೆರಳೆಣಿಕೆಯಷ್ಟಿರುವ ದಲಿತರ ಮೇಲೆ ಸವರ್ಣೀಯರು ಬಹಿಷ್ಕಾರ ಹಾಕಿ ದರ್ಪ ಮೆರೆಯುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೇವಲ ಕಾಟಾಚಾರಕ್ಕೆ ಎಂಬAತೆ ಸಂಧಾನ ಮಾಡಿದ್ದಾರೆ ವಿನಃ ಇದುವರೆಗೆ ದಲಿತರಿಗೆ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸಿದರು. ಕಲಬುರಗಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಈ ಘಟನೆ ಗಂಭೀರವಾಗಿ ಪರಿಗಣಿಸಿ, ಬಾಲಕಿಗೆ ಸೂಕ್ತ ರಕ್ಷಣೆ ಜತೆಗೆ ಕುಟುಂಬಕ್ಕೆ ಪರಿಹಾರ ನೀಡಬೇಕು. ಒಂದು ವೇಳೆ ಈ ಘಟನೆ ಪರಿಗಣಿಸದಿದ್ದರೆ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಹಿಷ್ಕಾರ ಪ್ರಕರಣದ ೧೦ ಜನರನ್ನು ಕೂಡಲೇ ಬಂಧಿಸಬೇಕೆAದು ಬಪ್ಪರಗಿಯಲ್ಲಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಡಿವೈಎಸ್‌ಪಿ ಜಾವೀದ್ ಇನಾಂದಾರ ದೂರವಾಣಿ ಮೂಲಕ ಮಾತನಾಡಿ, ಎರಡು ದಿನದಲ್ಲಿ ಅವರನ್ನು ಬಂಧಿಸುವುದಾಗಿ ಹೇಳಿದಾಗ ಪ್ರತಿಭಟನೆ ಹಿಂಪಡೆಯಲಾಯಿತು.
ಪಾದಯಾತ್ರೆಗೂ ಮುನ್ನ ಬಸವೇಶ್ವರ ವೃತ್ತದಿಂದ ತಮಟೆ ವಾದ್ಯಗಳೊಂದಿಗೆ ಅಂಬೇಡ್ಕರ್ ವೃತ್ತದಲ್ಲಿ ಡಾ.ಅಂಬೆಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಘೋಷಣೆ ಕೂಗುವುದರೊಂದಿಗೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಈ ವೇಳೆ ಬಾಲಕಿ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಉಪಾದ್ಯಕ್ಷ ಗಣೇಶ ದುಪ್ಪಲ್ಲಿ, ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ತಾಲೂಕಾಧ್ಯಕ್ಷ ಮಾನಪ್ಪ ಕಡಿಮನಿ, ಸಿದ್ದು ಮೇಲಿನಮನಿ, ಭೀಮಣ್ಣ ಚೈನಿ, ಕಾಶೀನಾಥ ಹಾದಿಮನಿ, ಭೀಮು ಮ್ಯಾಗೇರಿ, ಬಸವರಾಜ ದೊಡಮನಿ, ಪವಾಡೆಪ್ಪ ಮ್ಯಾಗೇರಿ, ಸಂಗಮೇಶ ಮಾಸ್ತರ, ದೇವರಾಜ ಹೊರಹಟ್ಟಿ, ಚನ್ನಪ್ಪ ತೀರ್ಥ, ನಾಗರಾಜ ದೊಡಮನಿ, ಅಮಲಪ್ಪ ಹಾದಿಮನಿ(ಹಳ್ಳಿ), ಗೋಪಾಲ ಕಟ್ಟಿಮನಿ, ನಂದಪ್ಪ ಪೀರಾಪುರ, ಮಹಾಂತೇಶ ದೊಡಮನಿ, ಪ್ರಭು ಕಚಕನೂರ, ಬಸವರಾಜ ಕಾಮನಟಗಿ, ಬಸವರಾಜ ಕೋನಾಳ, ನಿಂಗಣ್ಣ ದ್ಯಾಮನಾಳ, ಮಲ್ಲು ದೇವಾಪುರ, ತಿರುಪತಿ ಕೊಡೇಕಲ್, ಪರಮಣ್ಣ, ಮಂಜುನಾಥ, ಹುಸನಪ್ಪ, ಸೋಮಶೇಖರ, ಭೀಮಶಪ್ಪ, ಬಸವರಾಜ, ಪರಶುರಾಮ, ರಾಘವೇಂದ್ರ, ಸಾಬಣ್ಣ ಸೇರಿ ಅನೇಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಹುಣಸಗಿ ಸಿಪಿಐ ಸಚಿನ ಚಲುವಾದಿ ನೇತೃತ್ವದಲ್ಲಿ ನಾರಾಯಣಪುರ ಪಿಎಸ್‌ಐ ರಾಜಶೇಖರ ರಾಠೋಡ್ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.