ಜಿಲ್ಲೆ

ನ್ಯಾಯ ಪಂಚಾಯಿತಿಗಳಿಗೆ ಕಾನೂನಿನ ಮಾನ್ಯತೆ -ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಕಾರವಾರ
ಹಳ್ಳಿಗಳಲ್ಲಿ ನಡೆಯುವ ನ್ಯಾಯ ಪಂಚಾಯಿತಿಗಳಿಗೆ ಕಾನೂನಿನ ಮಾನ್ಯತೆ ನೀಡಲು ಯೋಜಿಸ, ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನೋಟರಿಗಳ ರಾಜ್ಯ ಸಮ್ಮೇಳನಕ್ಕೆ ಅಂಕೋಲಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ದೇಶದೆಲ್ಲೆಡೆ ಸುಮಾರು 3 ಕೋಟಿ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ಲೋಕ ಅದಾಲತ್‌ನಲ್ಲಿ ಸಂಧಾನದ ಮೂಲಕ ಪ್ರಕರಣಗಳು ಇತ್ಯರ್ಥವಾದರೂ ಮತ್ತೆ ಅವುಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗುತ್ತದೆ. ಲೋಕ ಅದಾಲತ್‌ನಲ್ಲಿ ಆದ ಪ್ರಕರಣಗಳನ್ನೇ ಅಂತಿಮ ಎಂದು ಘೋಷಿಸುವ ಬಗ್ಗೆ ನ್ಯಾಯಮೂರ್ತಿಗಳ ಜತೆ ಚರ್ಚಿಸಲಾಗುತ್ತಿದೆ ಎಂದರು.
 ನ್ಯಾಯ ವ್ಯವಸ್ಥೆಯನ್ನು ತ್ವರಿತಗೊಳಿಸಲು ಕ್ರಮ ವಹಿಸುವ ಬಗ್ಗೆ ಕೆಲ ದಿನಗಳ ಹಿಂದೆ ನಡೆದ ಅಖಿಲ ಭಾರತ ಕಾನೂನು ಸಚಿವರ ಸಮಾವೇಶದಲ್ಲಿ ಚರ್ಚಿಸಲಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವುದು, ಕೌನ್ಸೆಲಿಂಗ್ ಕೇಂದ್ರಗಳನ್ನು ತೆರೆಯುವುದು ಕಾನೂನು ಮಧ್ಯಸ್ಥಿಕೆ ಮುಂತಾದ ಉಪಕ್ರಮಗಳ ಜತೆಗೆ, ನ್ಯಾಯ ಸಮ್ಮತವಾಗಿ ಕಾನೂನಿನ ತಿಳುವಳಿಕೆಯಿರುವ ವ್ಯಕ್ತಿಗಳಿಂದ ನಡೆಯುವ ನ್ಯಾಯ ಪಂಚಾಯಿತಿಗೆ ಕಾನೂನಿನ ಮುದ್ರೆಯೊತ್ತುವ ಬಗ್ಗೆಯೂ ತಯಾರಿ ನಡೆದಿದೆ ಎಂದು ಮಾಹಿತಿ ನೀಡಿದರು,
ವಿದೇಶಿ ಕಾನೂನುಗಳ ಕೋರ್ಸ್
ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಕಾನೂನು ಮಧ್ಯಸ್ಥಿಕೆ ಕೇಂದ್ರಕ್ಕೆ ಒಂದು ಕಟ್ಟಡ ನಿರ್ಮಿಸಿಕೊಡುವ ಚಿಂತನೆ ನಡೆಸಲಾಗುವುದು. ದೇಶದ ಯುವಜನತೆ ಅಧ್ಯಯನ, ಉದ್ಯೋಗಕ್ಕೆ ವಿದೇಶಗಳಿಗೆ ಉನ್ನತ ಹೋದಾಗ ಅಲ್ಲಿನ ಕಾನೂನುಗಳ ಮಾಹಿತಿ ಇಲ್ಲದೇ ತೊಂದರೆ ಪಡುವ ಸಂದರ್ಭ ಸಾಕಷ್ಟಿದೆ. ಇದರಿಂದ ಜಿಲ್ಲೆಯ ಪ್ರತಿಷ್ಠಿತ ಕಾನೂನು ವಿವಿಗಳಲ್ಲಿ ಆಯ್ದ ಕೆಲವು ದೇಶಗಳ ಕಾನೂನಿನ ಮಾಹಿತಿ ನೀಡುವ ಆರರಿಂದ ಒಂದುವರೆ ವರ್ಷದ ಆನ್‌ಲೈನ್ ಕೋರ್ಸ್ಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗುವುದು. ವಿದೇಶಿ ವಿದ್ಯಾರ್ಥಿಗಳಿಗೆ ದೇಶದ ಕಾನೂನಿನ ಜ್ಞಾನ ನೀಡುವ ಕೋರ್ಸ್ಗಳನ್ನೂ ಪ್ರಾರಂಭಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದರು.