ಜಿಲ್ಲೆ

ನ್ಯಾ.ನಾಗಮೋಹನದಾಸ ವರದಿ ಅಂಗೀಕಾರಕ್ಕೆ ಒತ್ತಾಯ

ಶಹಾಪುರ: ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಉದ್ಯೋಗ ಶಿಕ್ಷಣಕ್ಕಾಗಿ ಶೇ.7.5ರಷ್ಟು ಮೀಸಲಾತಿ ನೀಡಬೇಕು ಎಂದು ಶಿಫಾರಸ್ಸು ಮಾಡಿದ ನ್ಯಾ.ನಾಗಮೋಹನದಾಸ್ ವರದಿಯನ್ನು ಸರ್ಕಾರ ಅಂಗೀಕರಿಸಬೇಕು ಎಂದು ಆಗ್ರಹಿಸಿ ಸೋಮವಾರ ಇಲ್ಲಿನ ತಹಸೀಲ್ ಕಚೇರಿ ಮುಂದೆ ತಾಲೂಕು ವಾಲ್ಮೀಕಿ ನಾಯಕ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ ಮಾತನಾಡಿ, ಚುನಾವಣಾ ಸಮಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ 24ಗಂಟೆಯೊಳಗೆ ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಕೇಂದ್ರದ ಮಾದರಿಯಂತೆ ಶೇ.7.5ರಷ್ಟು ಮೀಸಲಾತಿ ಜಾರಿಗೊಳಿಸುವುದಾಗಿ ರಾಜಕೀಯ ಪಕ್ಷಗಳು ಘೋಷಿಸಿದ್ದವು. ಆದರೆ ಇದೀಗ ಕೊಟ್ಟ ಮಾತು ಮರೆತಿವೆ ಎಂದು ಆರೋಪಿಸಿದರು.

ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ಮುಖಾಂತರ ಐತಿಹಾಸಿಕ ಹೋರಾಟ ನಡೆಸಿದಾಗ, ಅಂದಿನ ಸಮ್ಮಿಶ್ರ ಸರ್ಕಾರ ಎರಡು ತಿಂಗಳ ಕಾಲಾವಕಾಶ ಕೇಳಿತ್ತು. ಕಾಲಾಂತರದಲ್ಲಿ ಸಕರ್ಾರ ಅಧಿಕಾರ ಕಳೆದುಕೊಂಡು, ನಂತರ ಬಂದ ಯಡಿಯೂರಪ್ಪನವರ ಸರ್ಕಾರವು ಸಹ ಆಯೋಗದ ವರದಿ ನಂತರ ಕ್ರಮ ಜರುಗಿಸುವದಾಗಿ ಘೋಷಿಸಿದೆ ಎಂದರು.

ನಾಗಮೋಹನದಾಸ ಆಯೋಗ ವರದಿ ನೀಡಿ 2 ತಿಂಗಳು ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಅಧಿವೇಶನದಲ್ಲಿ ಆಯೋಗದ ವರದಿ ಮಂಡಿಸಿ ಅಂಗೀಕರಿಸುವ ಮೂಲಕ ಸಮುದಾಯಕ್ಕೆ ನ್ಯಾಯ ಮತ್ತು ಸಂವಿಧಾನ ಹಕ್ಕು ಒದಗಿಸಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ಆರ್.ಚೆನ್ನಬಸ್ಸು ವನದುರ್ಗ, ರವಿ ಯಕ್ಷಿಂತಿ, ಹಣಮಂತ ಟೋಕಾಪುರ, ರಾಘವೇಂದ್ರ ಯಕ್ಷಿಂತಿ, ಮಹಾದೇವ ಶಾರದಹಳ್ಳಿ, ಅಶೋಕ ಯಕ್ಷಿಂತಿ, ಶರಣಪ್ಪ ಪ್ಯಾಟಿ, ರಾಯಣ್ಣ ಬಿರಾಳ, ಶಿವರಾಜ, ನಾಗರಾಜ, ಆನಂದ ನಾಯಕ, ಮೌನೇಶ ಹೊಸಗೇರಿ, ಅಂಬ್ರೇಶ ಇಟಗಿ, ಮರೆಪ್ಪ ಸಗರ ಇದ್ದರು.