ಜಿಲ್ಲೆ

ನೌಕಾನೆಲೆಗಾಗಿ ಮತ್ತೆ ಭೂ ಸ್ವಾಧೀನ ಸಿದ್ಧತೆ

ಅಂಕೋಲಾ: ಸೀಬರ್ಡ್ ನೌಕಾ ಯೋಜನೆಯ ಮೂರನೇ ಹಂತದ ವಿಸ್ತರಣೆಗಾಗಿ ಅಂಕೋಲಾ ತಾಲೂಕಿನಲ್ಲಿ ಮತ್ತೆ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ.

ಅಂಕೋಲಾದ ಬಿಳಿಹೊಯ್ಗಿ, ಬಾಸಗೋಡ, ಮಂಜಗುಣಿ, ಸಿಂಗನಮಕ್ಕಿ, ವಾಡಿಬೊಗ್ರಿ ಹಾಗೂ ಹೊನ್ನೆಬೈಲ್ ಗ್ರಾಮಗಳ ಒಟ್ಟು 3,453 ಎಕರೆ ಪ್ರದೇಶವನ್ನು ಭೂ ಸ್ವಾಧೀನ ಮಾಡಿ ಕೊಡುವಂತೆ ಕಾರವಾರ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಿಂದ ಅಂಕೋಲಾ ತಹಸೀಲ್ದಾರ್ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದೆ. 2013ರ ಹೊಸ ಭೂ ಸ್ವಾಧೀನ ಕಾಯ್ದೆಯಂತೆ ಭೂಮಿಯನ್ನು ವಶಕ್ಕೆ ಪಡೆಯಬೇಕು. ಅದಕ್ಕಾಗಿ ಮರ ಗಿಡಗಳ ಸರ್ವೆ ನಡೆಸಿಕೊಡುವಂತೆ ಸೂಚಿಸಲಾಗಿದೆ. ಅಂಕೋಲಾ ಗಂಗಾವಳಿ ನದಿ ತಟದ ಫಲವತ್ತಾದ ಭೂಮಿಯ ಸ್ವಾಧೀನಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ.

1986ರಲ್ಲಿ ಮೊದಲ ಬಾರಿಗೆ ಸೀಬರ್ಡ್ ನೌಕಾನೆಲೆಗಾಗಿ ಕಾರವಾರ ಹಾಗೂ ಅಂಕೋಲಾದ 13 ಗ್ರಾಮಗಳನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. 2005ರಲ್ಲಿ ನೌಕಾನೆಲೆಯ ಮೊದಲ ಹಂತ ಮುಕ್ತಾಯವಾಗಿತ್ತು. 2019ರಿಂದ ಎರಡನೇ ಹಂತದ ವಿಸ್ತರಣೆ ನಡೆದಿದೆ. ಈಗ ಮತ್ತಷ್ಟು ಪ್ರದೇಶ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಆರು ಗ್ರಾಮಗಳ 3,453 ಎಕರೆ ಭೂಮಿ ಸ್ವಾಧೀನ ಮಾಡಿಕೊಡುವಂತೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಿಂದ ಪತ್ರ ಬಂದಿತ್ತು. ಆದರೆ, ಅದರಲ್ಲಿ ಭೂಮಿ ಯಾವುದು ಎಂಬುದನ್ನು ನಿಗದಿಪಡಿಸದ ಕಾರಣ ಅದನ್ನು ಸ್ಪಷ್ಟಪಡಿಸುವಂತೆ ಭೂ ಸ್ವಾಧೀನಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. | ಉದಯ ಕುಂಬಾರ ತಹಸೀಲ್ದಾರ್, ಅಂಕೋಲಾ