ಜಿಲ್ಲೆ

ನೌಕರಿ ಹೆಸರಲ್ಲಿ ಹತ್ತಿಸ್ತಾರೆ ‘ವಿಮಾನ’!

Dharwad

ಕೇಶವಮೂರ್ತಿ ವಿ.ಬಿ.,

ಹುಬ್ಬಳ್ಳಿ: ವಿಮಾನ ನಿಲ್ದಾಣದಲ್ಲಿ ಕೈತುಂಬ ಸಂಬಳ ನೀಡುವ ಉದ್ಯೋಗ ಖಾಲಿ ಇದೆ ಎಂದು ಅಂತರ್ಜಾಲದಲ್ಲಿ ನಕಲಿ ಜಾಹೀರಾತು ಸೃಷ್ಟಿಸಿ ಅಮಾಯಕ ನಿರುದ್ಯೋಗಿಗಳಿಂದ ಹಣ ಪಡೆದು ವಂಚಿಸುವ ಜಾಲ ಸಕ್ರಿಯವಾಗಿದ್ದು, ಈ ಜಾಲ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ವಾಟ್ಸ್​ಆಪ್ ಹಾಗೂ ಓಎಲ್​ಎಕ್ಸ್, ಇಮೇಲ್ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತುರ್ತು ನೇಮಕಾತಿ ಮಾಡಲಾಗುತ್ತಿದೆ. 22,000 ದಿಂದ 72,000 ರೂ.ವರೆಗೆ ವೇತನ ನೀಡಲಾಗುವುದು. ಆಸಕ್ತರು ಈ ಕೂಡಲೇ ಸಂರ್ಪಸಿ ಎಂದು ರಾಜಾರೋಷವಾಗಿ ಜಾಹೀರಾತು ಪ್ರಕಟಿಸುತ್ತಿದ್ದಾರೆ.

ಈಗಷ್ಟೇ ಕಾಲೇಜು ವ್ಯಾಸಂಗ ಮುಗಿಸಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರು ಈ ಜಾಲಕ್ಕೆ ಸಿಕ್ಕರೆ ಸಾಕು ಸಲೀಸಾಗಿ ಬಲೆಗೆ ಬೀಳಿಸುತ್ತಾರೆ. ವಿಮಾನ ನಿಲ್ದಾಣದ ಅಧಿಕಾರಿಯ ಸೋಗಿನಲ್ಲಿ ಮಾತನಾಡಿ, ನೋಂದಣಿ ಶುಲ್ಕ, ಪರೀಕ್ಷಾ ಶುಲ್ಕದ ಹೆಸರಲ್ಲಿ ಹತ್ತಾರು ಸಾವಿರ ರೂ. ಪಡೆಯುತ್ತಾರೆ.

ಕೆಲವರಿಂದ ಲಕ್ಷಾಂತರ ರೂ. ಪಡೆದಿರುವ ಪ್ರಕರಣಗಳೂ ಉಂಟು. ಆದರೆ, ವಂಚನೆಗೀಡಾದ ಯುವಕ-ಯುವತಿಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಬದಲಾಗಿ ವಿಮಾನ ನಿಲ್ದಾಣಕ್ಕೆ ಎಡತಾಕುತ್ತಿದ್ದಾರೆ. ನಿಲ್ದಾಣದ ನಿರ್ದೇಶಕರಿಗೆ ಕರೆ ಮಾಡಿ ನೋವು ತೋಡಿಕೊಳ್ಳುತ್ತಿದ್ದಾರೆ. ನಿತ್ಯವೂ ಇಂಥ ಹಲವು ಕರೆಗಳು ಬರುತ್ತಿವೆ. ಈ ಕುರಿತು ಪ್ರಾಧಿಕಾರಕ್ಕೆ ದೂರು ನೀಡಲಾಗಿದೆ ಎನ್ನುತ್ತಾರೆ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ.

ಅಧಿಕೃತ ವೆಬ್​ಸೈಟ್ ಸಂಪರ್ಕಿಸಿ: ದೇಶದ ಎಲ್ಲ ವಿಮಾನ ನಿಲ್ದಾಣಗಳ ಯಾವುದೇ ಹುದ್ದೆ ನೇಮಕವಿದ್ದರೂ ಅದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧಿಕೃತ ವೆಬ್​ಸೈಟ್ (www.aai.aero/en) ಮೂಲಕವೇ ಪ್ರಕಟಿಸುತ್ತದೆ. ಅದನ್ನು ಹೊರತುಪಡಿಸಿ ಸರ್ಕಾರದ ಜಾಬ್ ಜರ್ನಲ್ ಎಂಪ್ಲಾಯಮೆಂಟ್ ನ್ಯೂಸ್ ಮತ್ತು ರೋಜಗಾರ್ ಸಮಾಚಾರ ಹಾಗೂ ದೇಶದ ಅಗ್ರಪಂಕ್ತಿಯ ದಿನಪತ್ರಿಕೆಗಳಲ್ಲಿ ಮಾತ್ರ ಜಾಹೀರಾತು ನೀಡಲಾಗುತ್ತದೆ. ಉಳಿದಂತೆ ಯಾವುದೇ ನಕಲಿ ಜಾಹೀರಾತು ನಂಬಿ ಯಾರಿಗೂ ಹಣ ಕೊಡಬೇಡಿ. ಅರ್ಹರು ಅಧಿಕೃತ ವೆಬ್​ಸೈಟ್ ಮೂಲಕ ಮಾತ್ರ ವ್ಯವಹರಿಸಬೇಕು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ ‘ವಿಜಯವಾಣಿ’ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಗಾಳ: ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಂಚಕರು ಗಾಳ ಹಾಕುತ್ತಿದ್ದಾರೆ. ವಿಮಾನ ನಿಲ್ದಾಣದ ಫೋಟೋ, ಲೊಗೋ ಬಳಸಿ ಮೊಬೈಲ್, ಲ್ಯಾಪ್​ಟಾಪ್, ಕಂಪ್ಯೂಟರ್​ಗಳಿಗೆ ಎಸ್​ಎಂಎಸ್, ಇ-ಮೇಲ್ ಲಿಂಕ್ ಕಳುಹಿಸುವ ಮೂಲಕ ನೌಕರಿ ಹೆಸರಲ್ಲಿ ವಂಚಿಸುತ್ತಿದ್ದಾರೆ. ಈ ರೀತಿ ವಂಚಕರಿಗೆ ಆನ್​ಲೈನ್ ಮೂಲಕ ಹಣ ವರ್ಗಾಯಿಸಿ ವಂಚನೆಗೀಡಾದ ಹಲವು ವಿದ್ಯಾರ್ಥಿಗಳು ಏರ್​ಪೋರ್ಟ್​ಗೆ ಬಂದು ವಿಚಾರಿಸಿದ ಉದಾಹರಣೆಗಳಿವೆ ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ನೌಕರಿ ಕುರಿತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್ (www.aai.aero/en) ಮೂಲಕ ಮಾತ್ರ ಮಾಹಿತಿ ನೀಡಲಾಗುತ್ತದೆ. ಉಳಿದಂತೆ ಯಾವುದೇ ಜಾಹೀರಾತು ನಂಬಬೇಡಿ. ಯಾರಾದರೂ ವಂಚನೆಗೀಡಾಗಿದ್ದರೆ, ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿ. | ಪ್ರಮೋದಕುಮಾರ ಠಾಕರೆ, ವಿಮಾನ ನಿಲ್ದಾಣ ನಿರ್ದೇಶಕ, ಹುಬ್ಬಳ್ಳಿ