ಜಿಲ್ಲೆ

ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ಸುತ್ತೂರು ಶ್ರೀ

ಮೈಸೂರು: ಮೈಸೂರು ತಾಲೂಕಿನ ಕೀಳನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಲಿಸು ಫೌಂಡೇಷನ್, ವೆಟೆಸ್ಕೋ ಟೆಕ್ನಾಲಜಿನಿಂದ ನಿರ್ಮಾಣ ಮಾಡಿರುವ 90ನೇ ಗ್ರಂಥಾಲಯ ಹಾಗೂ ಕಲಿಸಿ ಹೊರಾಂಗಣ ಆಟದ ಮೈದಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಎಲ್ಲರೂ ಸರ್ಕಾರಿ ಉದ್ಯೋಗ ಬೇಕು, ಸರ್ಕಾರಿ ಸೌಲಭ್ಯಗಳು ಬೇಕು ಎಂದು ಬಯಸುತ್ತಾರೆ. ಆದರೆ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಿಲ್ಲ. ಪತ್ರಿಯೊಬ್ಬ ಸರ್ಕಾರಿ ನೌಕರನು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿದರೆ, ಅದರಷ್ಟಕ್ಕೆ ಪ್ರಗತಿ ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಬಹಳ ಮುಖ್ಯ. ಈ ಹಂತದಲ್ಲಿ ಮಕ್ಕಳು ಹೆಚ್ಚಾಗಿ ಕಲಿಯುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಪ್ರೀತಿ, ವಿಶ್ವಾಸ, ಉತ್ತಮ ಮೌಲ್ಯವನ್ನು ಬಿತ್ತಬೇಕು ಎಂದು ಸಲಹೆ ನೀಡಿದರು.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸರ್ಕಾರಿ ಸಾಲೆಗೆ ಖಾಸಗಿ ಸಂಘ, ಸಂಸ್ಥೆಗಳು ಕೈ ಜೋಡಿಸಿದರೆ ಯಾವ ರೀತಿ ಅಭಿವೃದ್ಧಿ ಮಾಡಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ಈ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿಗಳು ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯ. ಕಳೆದ ಬಾರಿ ಶಾಸಕರ ಅನುದಾನದಲ್ಲಿ 11 ಕೋಟಿ ರೂ.ಗೂ ಹೆಚ್ಚು ಹಣವನ್ನು ಸರ್ಕಾರಿ ಶಾಲೆಯ ಉನ್ನತೀಕರಣಕ್ಕೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮಾತನಾಡಿ, ಜಗತ್ತು ವೇಗವಾಗಿ ಬೆಳೆಯುತ್ತಿದೆ. ನಾವು ಅದಕ್ಕೆ ತಕ್ಕಂತೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಬಹಳ ಮುಖ್ಯ ಎಂದು ಅಭಿಪ್ರಾಯ ಪಟ್ಟರು.
ಡಿಡಿಪಿಐ ರಾಮಚಂದ್ರರಾಜೇ ಅರಸ್ ಮಾತನಾಡಿ, ಸಣ್ಣ ಸರ್ಕಾರಿ ಶಾಲೆಯಲ್ಲಿ ಇದು ಐತಿಹಾಸಿಕ ಕಾರ್ಯಕ್ರಮ. ಮುಖ್ಯಶಿಕ್ಷಕರಾಗಿ ಮಾಲಂಗಿ ಸುರೇಶ್ ಅವರು ಬಂದ ಮೇಲೆ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ ಎಂದು ಮೆಚ್ಚುಗೆ ನುಡಿಗಳನ್ನಾಡಿದರು.
ಮುಖ್ಯಶಿಕ್ಷಕ ಮಾಲಂಗಿ ಸುರೇಶ್ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು. ಖಾಸಗಿ ಶಾಲೆಯ ಮಕ್ಕಳಿಗೆ ಸಿಗುವ ವ್ಯವಸ್ಥೆ ನಮ್ಮ ಮಕ್ಕಳಿಗೂ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಗ್ರಂಥಾಲಯ, ಆಟದ ಮೈದಾನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕೊಡುಗೆ ಹಸ್ತಾಂತರ:
ಇದೇ ಸಂದರ್ಭದಲ್ಲಿ ದಾನಿಗಳು ಶಾಲೆಗೆ ಕುಡಿಯುವ ನೀರಿನ ಬಾಟಲ್, ಕುಡಿಯುನ ನೀರಿನ ಟ್ಯಾಂಕ್, ಚೇರ್, ಡಯಾಸ್, ಕಂಪ್ಯೂಟರ್ ಹಾಗೂ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮ ಅಂಗವಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಅಲ್ಲದೆ ಜೆಎಸ್‌ಎಸ್ ಸಂಚಾರ ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರಿನ ಜಯನಗರ ಶಾಸಕ ರಾಮಮೂರ್ತಿ, ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಪಿ.ಶಿವರಾಜು, ಜೆಎಸ್ ಎಸ್ ಕಾಲೇಜಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಮಧು, ಕಲಿಸು ಫೌಂಡೇಷನ್ ಸಂಸ್ಥಾಪಕ ಎಂ.ಎಂ.ನಿಖಿಲೇಶ್, ವಿಟಸ್ಕೋ ಟೆಕ್ನಾಲಜೀಸ್ ಇಂಡಿಯಾ ಪ್ರೈ.ಲಿ. ಮುಖ್ಯಸ್ಥ ಗಿರೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ನಾಗರಾಜು, ಸ್ವಾಮಿ, ಪ್ರಾಥಮಿಕ ಶಾಲಾ ವಿಭಾಗದ ಎಸ್ಡಿಎಂಸಿ ಅಧ್ಯಕ್ಷ ಮಲ್ಲು, ಪ್ರೌಢಶಾಲಾ ವಿಭಾಗದ ಎಸ್ಡಿಎಂಸಿ ವಿಭಾಗದ ಅಧ್ಯಕ್ಷ ಮಲ್ಲೇಶ್, ಆದಿತ್ಯ, ಮುಖಂಡರಾದ ರಾಮಸ್ವಾಮಿ, ಆಲನಹಳ್ಳಿ ಪುಟ್ಟಸ್ವಾಮಿ, ಮಹದೇವಪ್ಪ ಇತರರು ಇದ್ದರು.