ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ  
ಜಿಲ್ಲೆ

ನೌಕರರ ಆತ್ಮಹತ್ಯೆಗಳು ಸರ್ಕಾರಿ ಪ್ರಾಯೋಜಿತ

ಚಿಕ್ಕಮಗಳೂರು: ಸರ್ಕಾರಿ ನೌಕರರ ಆತ್ಮಹತ್ಯೆಗಳು ರಾಜ್ಯ ಸರ್ಕಾರದ ಪ್ರಾಯೋಜಿತವಾಗಿವೆ ಎಂದು ಟೀಕಿಸಿದ ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಚಾರ, ಅವೈಜ್ಞಾನಿಕ ಕಾರ್ಯಕ್ರಮಗಳು, ಸರ್ಕಾರದ ತಪ್ಪು ನಿರ್ಧಾರಗಳ ಪರಿಣಾಮ ನೌಕರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸರ್ಕಾರ ನಡೆಸಿದ್ದ ಭ್ರಷ್ಟಚಾರದಲ್ಲಿ ಅಕೌಂಟೆಂಟ್ ಚಂದ್ರಶೇಖರ್‌ ಆತ್ಮಹತ್ಯೆಗೆ ಶಿರ ಕೊಟ್ಟರು. ಇದು ಸರ್ಕಾರದ ಪ್ರಾಯೋಜಿತವಲ್ಲವೇ ಎಂದು ಪ್ರಶ್ನಿಸಿದರು.

ಸರ್ಕಾರದ ತಪ್ಪು ನಿರ್ಧಾರದಿಂದ ಎಸ್‌ಡಿಐ ಅಧಿಕಾರಿಯಾಗಿದ್ದ ಬೆಳಗಾವಿಯ ರುದ್ರಣ್ಣ ಯಡವಣ್ಣನವರ್ ಆತ್ಮಹತ್ಯೆಗೆ ಶರಣಾದರು. ಯಾದಗಿರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಮಾಡಿಕೊಂಡರು ಎಂದು ಸರ್ಕಾರದ ವಿರುದ್ಧ ಮುಗಿಬಿದ್ದರು.

ಗಣಿಗಾರಿಕೆ ಇಲಾಖೆಯಲ್ಲಿ ಮಹಿಳಾ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಂಡರು. ಸಂಬಳ ನೀಡದೇ ಕಿರುಕುಳ ನೀಡಿದ್ದ ಪರಿಣಾಮ ಬೇಸತ್ತು ವಾಟರ್ ಮ್ಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ತಿಂಗಳಿಂದ ಸಂಬಳ ನೀಡದೆ ಇದ್ದ ಪರಿಣಾಮ ತನ್ನ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಬೇಸರಗೊಂಡಿದ್ದ ಗ್ರಂಥಾಲಯ ಮೇಲ್ವಿಚಾರಕಿ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವುದು ಹೃದಯ ಹೀನ ಸರ್ಕಾರ. ಮಾನವೀಯತೆ ಸತ್ತು ಹೋಗಿರುವ ಸರ್ಕಾರ. ದಪ್ಪ ಚರ್ಮ ಇದ್ದರೂ ಬಾರುಕೋಲಿನ ಚಡಿ ಏಟು ಕೊಟ್ಟರೂ ಸ್ವಲ್ಪವಾದರು ನಾಟ್ಟುತ್ತೆ. ಆದರೆ ಸರ್ಕಾರ ಸತ್ತು ಹೋಗಿರುವುದರಿಂದ ಕರೆಂಟ್ ಶಾಕ್ ಕೊಟ್ಟರೂ ಮಾನವೀಯತೆ ಚಿಗುರದ ಸರ್ಕಾರ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಇನ್ನಷ್ಟು ಆತ್ಮಹತ್ಯೆಗಳು ನಡೆಯುವುದನ್ನು ಸರ್ಕಾರ ಈಗಲೇ ಎಚ್ಛೆತ್ತುಕೊಂಡು ತಡೆಯಬೇಕಾಗಿದೆ. ವಿರೋಧ ಪಕ್ಷವಾಗಿ ನಾವು ರಾಜ್ಯದಲ್ಲಿ ಜನರನ್ನು ಜಾಗೃತಗೊಳಿಸುವ ಮತ್ತು ಹೋರಾಟ ರೂಪಿಸುವ ಕುರಿತು ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುತ್ತೇನೆ. ಜೊತೆಗೆ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗುವುದಾಗಿ ಹೇಳಿದರು.