ಜಿಲ್ಲೆ

ನೋವಿನಲ್ಲೂ ದುಡ್ಡು ಹೊಡೆದ ಸರ್ಕಾರ, ಶಾಸಕ ಶರತ್ ಬಚ್ಚೇಗೌಡ ಆರೋಪ, ಕಾರಹಳ್ಳಿಯಲ್ಲಿ ದಿನಸಿ ಕಿಟ್ ವಿತರಣೆ

ಕುಂದಾಣ: ಕರೊನಾ 2ನೇ ಅಲೆಯ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದ್ದ ಸರ್ಕಾರ ಜನರ ನೋವಿನಲ್ಲೂ ಹಣ ಹೊಡೆದಿದೆ. ಕರೊನಾದಿಂದ ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಕರೊನಾಕ್ಕೆ ಬಲಿಯಾದರು. ಇವರೆಲ್ಲರ ಸಾವಿಗೆ ಸರ್ಕಾರದ ಭ್ರಷ್ಟ ನೀತಿಯೇ ಕಾರಣ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು.

ಹೋಬಳಿಯ ಕಾರಹಳ್ಳಿಯಲ್ಲಿ ಏರ್ಪಡಿಸಿದ್ದ ಗ್ರಾಪಂ ವಾರ್ಡ್ ಸಮಿತಿ ರಚನೆ ಹಾಗೂ ಪಂಚಾಯಿತಿ ವ್ಯಾಪ್ತಿಯ ಬಡವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಹೋದ ಬೆಂಗಳೂರು ಗ್ರಾಮಾಂತರ ಪ್ರದೇಶದವರು ಹೆಚ್ಚಿನ ದುಡ್ಡು ಹೊಡೆಯಲು ಅವಕಾಶ ಇರುವ ಖಾತೆಯೇ ಬೇಕೆಂದು ಸರ್ಕಾರವನ್ನೇ ಬ್ಲ್ಯಾಕ್‌ಮೇಲ್ ಮಾಡಿ, ಕ್ಯಾತೆ ತೆಗೆದರು. ಕಮಿಷನ್ ಹಣ ಹಂಚಿಕೊಳ್ಳಲು ಸಚಿವರೆಲ್ಲರೂ ಸ್ಪರ್ಧೆಗೆ ಬಿದ್ದವರಂತೆ ಆಡಿದರು. ಇದು ರಾಜ್ಯದಲ್ಲಿ ಕರೊನಾ ಸೋಂಕಿತರ ನರಳಾಟವನ್ನು ಹೆಚ್ಚಿಸಿತು ಎಂದರು.

ಸರ್ಕಾರದ ನಿರ್ಲಕ್ಷ್ಯ ಹಾಗೂ ಭ್ರಷ್ಟ ನೀತಿಯ ನಡುವೆಯೂ ಕಾಂಗ್ರೆಸ್ ಒಂದು ದಿನವೂ ವಿರಮಿಸದೆ ಜನರ ಸಂಕಷ್ಟಕ್ಕೆ ಸ್ಪಂದಿಸಿತು ಎಂದು ಹೇಳಿದರು.

ಶಾಸಕ ಕೃಷ್ಣ ಬೈರೇಗೌಡ ಮಾತನಾಡಿ, ಕರೊನಾ ಪಿಡುಗಿನ ಸಂದರ್ಭದಲ್ಲಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಅಲ್ಲಿನ ಜನರ ಖಾತೆಗೆ 4 ಸಾವಿರ ರೂ. ಧನಸಹಾಯ ಸಂದಾಯ ಮಾಡಿದವು. ಜತೆಗೆ ದಿನಸಿ ಕಿಟ್‌ಗಳನ್ನು ಹಂಚಿದರು. ಕರ್ನಾಟಕದ ಸರ್ಕಾರ ಮಾತ್ರ ಜನರ ಸಹಾಯಕ್ಕೆ ಮುಂದಾಗಲು ಹಿಂದೇಟು ಹಾಕಿ, ಹೃದಯಶೂನ್ಯತೆ ತೋರಿತು ಎಂದು ಆರೋಪಿಸಿದರು.

ನಾವು ಏನಾದರೂ ಹೇಳಿದರೆ ದೇವನಹಳ್ಳಿ ಶಾಸಕರಿಗೆ ಕೆಂಡದಂಥ ಕೋಪ ಬರುತ್ತದೆ. ನಮ್ಮ ಮಾತುಗಳನ್ನೇ ದೊಡ್ಡದು ಮಾಡಿ ಟೀಕಿಸುತ್ತಾರೆ. ಅದರ ಬದಲು ಜನಪರ ಕೆಲಸ ಮಾಡಲು ಅವರು ಮುಂದಾಗಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್, ಸದಸ್ಯರಾದ ಚನ್ನಪ್ಪ, ಚೇತನ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ಶಾಂತಕುಮಾರ್, ಮುಖಂಡರಾದ ಜಗನ್ನಾಥ್, ನಾಗೇಗೌಡ, ಎಸ್.ಪಿ. ಮುನಿರಾಜ್, ಲಕ್ಷೇಗೌಡ, ಸುಧಾಕರ್, ಕೃಷ್ಣವೇಣಿ, ಪದ್ಮಮ್ಮ, ಸರಳಾ ಮತ್ತಿತರರಿದ್ದರು.