ಚಿತ್ರದುರ್ಗ: ಮಾನವೀಯ ಮೌಲ್ಯ, ಪ್ರಾಮಾಣಿಕತೆಯೊಂದಿಗೆ ಉತ್ತಮ ಆಡಳಿತ ನೀಡುವಂತೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸರ್ಕಾರಿ ಅಧಿಕಾರಿ, ನೌಕರರಿಗೆ ಸೂಚಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತಂತೆ ನಗರದ ಎಸ್‌ಜಿ ಕಲ್ಯಾಣ ಮಂಟಪದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ನೌಕರರ ಕರ್ತವ್ಯ ಲೋಪದ ಬಗ್ಗೆ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಹಾಗೂ ಲೋಕಾಯುಕ್ತ, ಉಪಲೋಕಾಯುಕ್ತರು ಸ್ವಯಂಪ್ರೇರಿತವಾಗಿ ದಾಖಲಿಸುವ ದೂರುಗಳು ಮೆಲ್ನೋಟಕ್ಕೆ ಸಾಬೀತಾಗಬಹುದೆಂದು ಅನಿಸಿದರೆ ಲೋಕಾಯುಕ್ತದಿಂದ ನೋಟಿಸ್ ಕೊಡಲಾಗುತ್ತದೆ. ಸಾಕ್ಷ್ಯಗಳ ಸಂಗ್ರಹಕ್ಕೆ ಸರ್ಚ್ ವಾರೆಂಟ್ ನೀಡಬಹುದು. ಅನೇಕರು ನೋಟಿಸ್‌ಗೆ ಉತ್ತರಿಸದೇ ಹೋದರೆ ವಿಚಾರಣೆ ವೇಳೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ನೋಟಿಸ್‌ಗೆ ಉತ್ತರಿಸದಿರುವುದು, ಸೂಚನೆಗಳನ್ನು ಪಾಲಿಸದಿರುವುದು ನ್ಯಾಯಾಂಗ ನಿರ್ದೇಶನದ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದರು.
ದೂರುಗಳ ಕುರಿತು ಸೂಕ್ತ ವಿವರಣೆ ನೀಡಿದರೆ ಪ್ರಾಥಮಿಕ ಹಂತದಲ್ಲೇ ಪ್ರಕರಣಗಳ ವಿಲೇ ಸಾಧ್ಯತೆ ಇದೆ. ಕಾಯ್ದೆಯಲ್ಲಿ ನೌಕರರಿಗೆ ಒದಗಿಸಿರುವ ರಕ್ಷಣೆಯಾಗಿದೆ. ಆರೋಪ ಸಾಬೀತಾದರೆ ಮುಂದಿನ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಸರ್ಕಾರವೂ ನೌಕರರಿಂದ ವಿವರಣೆ ಕೇಳುತ್ತದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣವಾಸುದೇವ್ ಮಾತನಾಡಿ, ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವ ಭಾಗ್ಯ ದೊರೆಯುವುದಿಲ್ಲ. ನೌಕರರು ಜಾಗೃತಿಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ನೌಕರರಿಗೂ ಸಾಕಷ್ಟು ಒತ್ತಡವಿದೆ, ಇರುವಂಥ ಸೌಲಭ್ಯಗಳ ನಡುವೆ ಉತ್ತಮ ಸೇವೆ ನೀಡಬೇಕು ಎಂದರು.
ಲೋಕಾಯುಕ್ತದ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್, ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮ, ಎಸಿ ವೆಂಕಟೇಶ್‌ನಾಯಕ್, ಜಿಪಂ ಸಿಪಿಒ ಗಾಯತ್ರಿ ಇದ್ದರು.