ಜಿಲ್ಲೆ

ನೋಟಿಸ್‌ಗೆ ಉತ್ತರ ನೀಡುವೆ: ಶ್ರೇಯಸ್

ಹಾಸನ: ಹೈಕೋರ್ಟ್‌ನಿಂದ ನನಗೆ ನೋಟಿಸ್ ಬಂದಿದೆ. ಅದಕ್ಕೆ ಕಾನೂನು ತಜ್ಞರ ಸಲಹೆ ಪಡೆದು ಉತ್ತರ ಕೊಡುವೆ. ನಾನು ಯಾವುದೇ ತಪ್ಪು ಮಾಡಿಲ್ಲ. ದೇಶದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಇದರ ವಿರುದ್ಧ ಹೋರಾಟ ಮಾಡುವೆ, ನನಗೇ ಜಯ ಸಿಗಲಿದೆ. ಸಂಸದನಾಗಿ ನಾನೇ ಮುಂದುವರಿಯುವೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ವಕೀಲರೊಬ್ಬರು ಸಂಸದರು ಚುನಾವಣೆ ವೇಳೆ ಅಫಿಡವಿಟ್ ಸಲ್ಲಿಸುವಾಗ ಕೆಲವು ಅಂಶ ಮರೆ ಮಾಚಿದ್ದಾರೆ ಎಂದು ಹೈಕೋರ್ಟ್‌ಗೆ ದೂರು ಸಲ್ಲಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಜೈಲಿಗೆ ಹೋಗಿ ಬಂದಿರುವವರಿಂದ ನಾನು ಏನು ಕಲಿಯಬೇಕಿಲ್ಲ ಎಂದು ಹೆಸರು ಹೇಳದೆಯೇ ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದ ಅನುದಾನದಿಂದಲೇ ನಗರದ ಹೊಸ ಬಸ್ ನಿಲ್ದಾಣದ ಎದುರು ಬಾಕಿ ಉಳಿದಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರವೇ ಪೂರ್ಣ ಗೊಳಿಸಲಾಗುವುದು. ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರ ಮನವಿ ಮೇರೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೂ ಕಾಮಗಾರಿ ಮಾಡಲು ಒಪ್ಪಿದ್ದಾರೆ. ಅನುದಾನ ಕೊಡುವುದಾಗಿಯೂ ಹೇಳಿದ್ದಾರೆ ಎಂದರು.