ಜಿಲ್ಲೆ

ನೋಟಿಸ್ ಜಾರಿ ಮಾಡದೆ ಜಮೀನು ಹರಾಜು: ಪ್ರಾದೇಶಿಕ ಕಚೇರಿ ಪ್ರಬಂಧಕರಿಗೆ ರೈತರಿಂದ ಮನವಿ

ಹಾಸನ: ಯಾವುದೇ ರೀತಿಯ ನೋಟಿಸ್ ಜಾರಿ ಮಾಡದೇ ರೈತನ ಜಮೀನು ಹರಾಜಿಗೆ ಕೆನರಾ ಮುಂದಾಗಿದ್ದು, ಈ ಕ್ರಮದಿಂದ ರೈತರ ಪ್ರಾಣಹಾನಿ, ಮಾನಹಾನಿ, ಇತರೆ ನೋವುಗಳಿಗೆ ಬ್ಯಾಂಕಿನವರೆ ಕಾರಣವಾಗುತ್ತಿದ್ದಿರಿ. ಈ ಕ್ರಮ ಅನುಸರಿಸಬೇಡಿ ಎಂದು ರೈತ ಸಂಘದ ಶಾಂತಕುಮಾರ್ ನೇತೃತ್ವದಲ್ಲಿ ರೈತರು ಬುಧವಾರ ನಗರದ ಬಿ.ಎಂ. ರಸ್ತೆ ಬಳಿ ಇರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಪ್ರಬಂಧಕರಿಗೆ ಮನವಿ ಸಲ್ಲಿಸಿದರು.

ಇದೆ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಬಿ. ಧರ್ಮರಾಜು ಮಾತನಾಡಿ, ಕೆ.ಬಿ.ಮಲ್ಲೇಶ್ ಅವರು ಕೆನರಾ ಬ್ಯಾಂಕಿನಿಂದ 3 ಲಕ್ಷ ರೂ. ಕೃಷಿ ಸಾಲ ಪಡೆದಿರುತ್ತಾರೆ. ಅದು ಈಗ ಅಸಲು ಬಡ್ಡಿ ಸೇರಿ ಸುಮಾರು 6,66,758 ರೂ ಆಗಿರುತ್ತದೆ. ಸಾಲಕ್ಕಾಗಿ ಜಾಮೀನಾಗಿ ಒತ್ತೆ ಇಟ್ಟಿರುವ ಜಮೀನಿನ ಪೈಕಿ ಆಲೂರು ತಾಲೂಕು ಕುಂದೂರು ಹೋಬಳಿ ಕಾರಿಗನಹಳ್ಳಿ ಗ್ರಾಮದ ಸರ್ವೆ ನಂ. 66/4 ಅನ್ನು ಮಾತ್ರ 2025 ಮಾ. 25 ರಂದು ಹರಾಜಿಗೆ ಇಟ್ಟಿರುತ್ತೇವೆಂದು ಹೇಳಿರುತ್ತೀರಿ. ಆದರೆ ಇವರಿಗೆ ಈ ದಿನಾಂಕದ ಹರಾಜಿನ ಯಾವುದೇ ರೀತಿಯ ನೋಟಿಸ್ ನೀಡಿಲ್ಲ ಎಂದು ದೂರಿದರು.

ಹರಾಜಿಗೆ ಇಟ್ಟಿರುವ ಜಮೀನಿನ ಪೈಕಿ ಸರ್ವೆ ನಂ. 66/4ರಲ್ಲಿ ಸುಮಾರು ಮನೆ ಮತ್ತು ಜಾಗ ಸೇರಿವೆ. ಅಂದಾಜು ಒಂದೂವರೆ ಕೋಟಿ ರೂ. ಬೆಲೆ ಬಾಳುತ್ತದೆ. ನೀವು ಕೇವಲ 10 ಲಕ್ಷ ರೂ. ಅಂದಾಜು ಮಾಡಿರುತ್ತೀರಿ. ಇವರು ಕೊಡಬೇಕಾಗಿರುವ ಮೊತ್ತ ಕೇವಲ 6,66,758 ರು. ಮಾತ್ರ. ನೀವು ಹರಾಜುದಾರರ ಜತೆ ಸೇರಿಕೊಂಡು ಆಮಿಷಕ್ಕೆ ಒಳಗಾಗಿದ್ದೀರಿ. ಒಂದು ತಿಂಗಳ ಕಾಲಾವಧಿ ಕೊಡಿ. ಬಾಕಿ ಪಾವತಿಸುತ್ತೇವೆ ಎಂದು ಕೇಳಿಕೊಳ್ಳಲಾಗಿದೆ. ಇವರಿಗೆ ವೃದ್ದಾಪ್ಯ ವೇತನವನ್ನು ಸಹ ನಿಮ್ಮ ಬ್ಯಾಂಕು ಮುಟ್ಟುಗೋಲು ಹಾಕಿಕೊಂಡಿದೆ. ಅವರಿಗೆ ಕೊಡಬೇಕಾದ ವೃದ್ಧಾಪ್ಯ ವೇತನವನ್ನು ಮೊದಲು ಬಿಡುಗಡೆ ಮಾಡಿ, ಅವರ ಖಾತೆ ಜಮಾ ಮಾಡಿ. ಮತ್ತು ಈಗಾಗಲೇ ಸರ್ಕಾರ ರೈತರ ಸಾಲಗಳ ಮೇಲೆ ವಸೂಲಿಗಾಗಿ ದಬ್ಬಾಳಿಕೆ ಮತ್ತು ಮೈಕ್ರೋ ಫೈನಾನ್ಸ್ ರೀತಿ ನಡೆದುಕೊಳ್ಳಬಾರದೆಂದು ಅಧಿವೇಶನದಲ್ಲಿ ಹೇಳಿದೆ. ಹಾಗಾದರೆ ನೀವು ರೈತರ ಮೇಲೆ ನಡೆಸುತ್ತಿರುವ ಈ ಕಾರ್ಯವನ್ನು ರೈತ ಸಂಘವು ಪ್ರತಿಭಟಿಸುತ್ತೇವೆ ಎಂದು ಹೇಳಿದರು.

ಇದೆ ವೇಳೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ನಾಗೇಶ್, ತಾಲೂಕು ಉಪಾಧ್ಯಕ್ಷ ಕೃಷ್ಣಮೂರ್ತಿ, ನೊಂದ ರೈತ ಮಲ್ಲೇಶ್, ಗುರುಮೂರ್ತಿ, ಮಂಜುನಾಥ್, ಶೇಖರ್, ಮಹೇಶ್ ಇತರರು ಉಪಸ್ಥಿತರಿದ್ದರು.