ಜಿಲ್ಲೆ

ನೋ ಡ್ರಗ್ ವಿಶೇಷ ಅಭಿಯಾನ, ವಿದ್ಯಾರ್ಥಿಗಳೊಂದಿಗೆ ಪೊಲೀಸ್ ಇಲಾಖೆ ಸಂವಾದ

ಚಿಕ್ಕಬಳ್ಳಾಪುರ: ಡ್ರಗ್‌ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಅಭಿಯಾನ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಭಾನುವಾರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಮೂಲಕ ಸಂವಾದ ನಡೆಸಿತು.

ನಗರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಡ್ರಗ್ಸ್ ಸೇವನೆ ದುಷ್ಪರಿಣಾಮ, ಅನುಮಾನಾಸ್ಪದ ಪ್ರಕರಣಗಳು, ಇತರರಲ್ಲಿ ಅರಿವು ಮೂಡಿಸುವ ಕುರಿತು ತಿಳಿಸಿದರು.

ಶಾಲಾ-ಕಾಲೇಜುಗಳು ಡ್ರಗ್ಸ್, ತಂಬಾಕುಮುಕ್ತ ಪ್ರದೇಶಗಳಾಗಿರಬೇಕು. ಒಂದು ವೇಳೆ ಯಾರಾದರೂ ದುಷ್ಕೃತ್ಯದಲ್ಲಿ ತೊಡಗಿದ್ದರೆ, ಇತರರನ್ನು ಪ್ರೇರೇಪಿಸುತ್ತಿದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಸುಳಿವು ನೀಡಿದವರ ಹೆಸರು ಗೌಪ್ಯವಾಗಿರಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವರಿಷ್ಠಾಧಿಕಾರಿ ತಿಳಿಸಿದರು.

ಡ್ರಗ್ಸ್ ಸೇವನೆ ಆರೋಗ್ಯವನ್ನು ಹದಗೆಡುತ್ತಿದೆ. ಎನ್‌ಡಿಪಿಸಿಎಸ್ ಕಾಯ್ದೆ 1985ರ ಅನ್ವಯ ಯಾವುದೇ ಮಾದಕ ವಸ್ತು ಉತ್ಪಾದನೆ, ಮಾರಾಟ, ಖರೀದಿ, ಸಾಗಣೆ, ಸಂಗ್ರಹಣೆ ಮತ್ತು ಸೇವನೆ ನಿಷೇಧ. ಇದನ್ನು ಉಲ್ಲಂಘಿಸಿದ್ದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವರಿಷ್ಠಾಧಿಕಾರಿ ಎಚ್ಚರಿಸಿದರು.

ಫೋಟೋ ಸ್ಪರ್ಧೆ: ಆನ್‌ಲೈನ್‌ನಲ್ಲಿ ನೃತ್ಯ, ಗಾಯನ, ಕಿರುನಗೆ ಸೇರಿ ಇತರ ಚಟುವಟಿಕೆಯ ಚಿತ್ರೀಕರಣದ ವಿಡಿಯೋ ಅಪ್‌ಲೌಡ್ ಮಾಡಿ, ಡ್ರಗ್ಸ್ ಸೇವ ವಿಚಾರದಲ್ಲಿ ಹೌದು ಇಲ್ಲವೇ ಇಲ್ಲ ಎಂದು ಹೇಳುವ ಹ್ಯಾಷ್ ಫ್ರಿ ಸಿಬಿಪುರ, ಹ್ಯಾಷ್ ಸಿಬಿಪುರ ಅಗೆನೆಸ್ಟ್ ಡ್ರಗ್ಸ್ ಹೆಸರಿನಲ್ಲಿ ಸ್ಪರ್ಧೆ ಕೈಗೊಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಾಳೆ ವಾಕಥಾನ್, ಜಾಥಾ: ನೋ ಡ್ರಗ್ಸ್ ಅಭಿಯಾನದ ಹಿನ್ನೆಲೆಯಲ್ಲಿ ಸಾರಿಗೆ ಚಾಲಕರು ಮತ್ತು ನಿರ್ವಾಹಕರು, ಕಾಲೇಜುಗಳಲ್ಲಿ ಅರಿವು ಮೂಡಿಸಲಾಗಿದೆ. ಸೆ.14ರಂದು ಕೊಳಚೆ ಪ್ರದೇಶ, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಅರಿವು, ಸೆ.15ರಂದು ವಾಕಥಾನ್ ಮತ್ತು ಜಾಥಾ, ಸೆ.16 ಗಡಿ ಅಪರಾಧ ಸಭೆ ಮತ್ತು ಸೆ.17 ರಂದು ವಿದ್ಯಾರ್ಥಿಗಳನ್ನೊಳಗೊಂಡ ಜಿಲ್ಲಾಮಟ್ಟದ ಸಭೆ ಕೈಗೊಳ್ಳಲಾಗಿದೆ.