ಕಲಬುರಗಿ: ನಗರದ ಅಪ್ಪನ ಕೆರೆ ಹತ್ತಿರದ ಸಪ್ತಗಿರಿ ಹೊಟೇಲ್‌ನಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಮಲ್ಲಿಕಾರ್ಜುನನ ರೋಜಾ ಬಡಾವಣೆಯಲ್ಲಿನ ಮನೆಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಭೇಟಿ ನೀಡಿ, ಸಾಂತ್ವಾನ ಹೇಳಿದರು.
ಕುಟುಂಬದವರಿಗೆ ಸಾಂತ್ವಾನ ಹೇಳಿ, ಸಿಎಂ ಪರಿಹಾರ ನಿಧಿಯಿಂದ ನೆರವು ದೊರಕಿಸುವ, ವಸತಿ ಯೋಜನೆಯಲ್ಲಿ ಮನೆ ಮಂಜೂರಿ ಮಾಡುವ ಭರವಸೆ ನೀಡಿದರು. ಕೂಡಾ ಅಧ್ಯಕ್ಷ ಮಜರ್ ಅಲಂಖಾನ್, ಸಂತೋಷ ಪಾಟೀಲ್ ದಣ್ಣೂರ, ಈರಣ್ಣ ಝಳಗಿ ಇದ್ದರು.
ಸ್ಫೋಟದ ಸ್ಥಳ ಪರಿಶೀಲನೆ: ಗ್ಯಾಸ್ ಸ್ಫೋಟಗೊಂಡ ಸಪ್ತಗಿರಿ ಹೋಟಲ್‌ಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ಸಿಲಿಂಡರ್ ಸುರಕ್ಷತೆ ಕಾಪಾಡಬೇಕು. ಇಂತಹ ಘಟನೆ ಮರುಕಳಿಸದಂತೆ ಪೊಲೀಸ್, ಅಗ್ನಿಶಾಮಕ ದಳದವರು ಜಾಗೃತಿ ಮೂಡಿಸಬೇಕು ಎಂದರು.
ಮೃತ ಬಾಲಕನ ಮನೆಗೆ ಭೇಟಿ: ವಿದ್ಯುತ್ ತಗುಲಿ ಮೃತಪಟ್ಟ ಬಿದ್ದಾಪುರ ಕಾಲನಿಯ ಬಾಲಕ ಭೀಮಾಶಂಕರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಅಲ್ಲಮಪ್ರಭು ಪಾಟೀಲ್ ಸಾಂತ್ವಾನ ಹೇಳಿ, ವೈಯಕ್ತಿಕ ಧನ ಸಹಾಯ ಮಾಡಿದರು. ಮಾನವೀಯ ನೆಲೆಯಲ್ಲಿ ನೆರವು ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಸಿಎಂ ಪರಿಹಾರ ನಿಧಿಯಿಂದ ನೆರವಿನ ಭರವಸೆ ನೀಡಿದರು.