ಔರಾದ್: ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಔರಾದ್ ಹಾಗೂ ಕಮಲನಗರ ತಾಲೂಕುಗಳಲ್ಲಿ ಸಾಕಷ್ಟು ಹಾನಿಯಾಗಿದ್ದು, ಪ್ರತಿ ಗ್ರಾಮ ಮತ್ತು ಹೊಲಕ್ಕೆ ಭೇಟಿ ನೀಡಿ ಸಮೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸುವ ಮೂಲಕ ಬೆಳೆ ನಷ್ಟದಿಂದ ನೊಂದಿರುವ ಎಲ್ಲ ರೈತರಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಶಾಸಕ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆಯಲ್ಲಿ ಮಾತನಾಡಿದ ಅವರು, ಜುಲೈ ಮತ್ತು ಆಗಸ್ಟ್ನಲ್ಲಿ ಮಳೆಯಿಂದಾಗಿ ಕ್ಷೇತ್ರದಲ್ಲಿ ಅಂದಾಜು ಒಂದು ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪೈಕಿ ಸುಮಾರು ೬೦ ಸಾವಿರ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿಯಾಗಿದೆ. ಆದರೆ ೩೦ ಸಾವಿರ ಹೆಕ್ಟೇರ್ ಮಾತ್ರ ಸಮೀಕ್ಷೆ ಮಾಡಿರುವುದು ಸರಿಯಲ್ಲ ಎಂದು ಬೇಸರ ಹೊರಹಾಕಿದರು.
ನದಿ ಪ್ರದೇಶ, ಹಳ್ಳ-ಕೊಳ್ಳ ಮತ್ತು ತಗ್ಗು ಪ್ರದೇಶದಲ್ಲಿನ ಎಲ್ಲ ಬೆಳೆಗಳು ಸಂಪೂರ್ಣ ಮುಳುಗಡೆಯಾಗಿವೆ. ಕೆರೆ ಕಟ್ಟೆಗಳು ಒಡೆದು ಮಣ್ಣಿನಸಹಿತ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಬಿತ್ತನೆಯಾದ ಸೋಯಾಬೀನ್, ತೊಗರಿ, ಹತ್ತಿ ನಷ್ಟವಾಗಿದ್ದು, ಕಟಾವಿಗೆ ಬಂದಿದ್ದ ಉದ್ದು, ಹೆಸರು ಸಂಪೂರ್ಣ ಹಾಳಾಗಿದೆ. ಸಮೀಕ್ಷೆಗೆ ನಿಯೋಜಿಸಿದ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡದೆ ಕಚೇರಿಯಲ್ಲಿ ಕುಳಿತು ವರದಿ ಸಲ್ಲಿಸುತ್ತಿದ್ದಾರೆ. ಹೀಗಾದರೆ ಅನ್ನದಾತರ ಗತಿ ಏನಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪ ಜೀವನಕ್ಕೆ ಆಧಾರವಾಗಿದ್ದ ಬೆಳೆ ಕಳೆದುಕೊಂಡು ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅಧಿಕಾರಿಗಳು ನೆರವಿಗೆ ನಿಲ್ಲಬೇಕು. ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ಮಾಡಿ ಸರ್ಕಾರಕ್ಕೆ ನಿಖರವಾದ ವರದಿ ಸಲ್ಲಿಸಿ ರೈತರಿಗೆ ಅನುಕೂಲವಾಗುಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಬೆಳೆ ವಿಮೆ ನೀಡುವ ಕಂಪನಿಗಳಿಂದ ಸಾಕಷ್ಟು ಅನ್ಯಾಯವಾಗುತ್ತಿದೆ. ಕ್ಷೇತ್ರದಲ್ಲಿ ಹೆಚ್ಚು ರೈತರು ಯೋಜನೆಯಡಿ ನೋಂದಣಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕರೆದೊಯ್ದು ಕಂಪನಿಯವರು ಸಮೀಕ್ಷೆ ಮಾಡಬೇಕು. ಎಲ್ಲ ರೈತರಿಗೆ ತಂತ್ರಾಂಶದ ಜ್ಞಾನ ಇರುವುದಿಲ್ಲ. ಹೀಗಾಗಿ ಆಲೈನ್ ಮೂಲಕ ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ತಾಪಂ ಆಡಳಿತಾಧಿಕಾರಿ ಸೂರ್ಯಕಾಂತ ಬಿರಾದಾರ್, ತಹಸೀಲ್ದಾರ್‌ರಾದ ಮಹೇಶ ಪಾಟೀಲ್, ರಮೇಶ ಪೆದ್ದೆ, ತಾಪಂ ಕಾರ್ಯನಿರ್ವಹಣ ಅಧಿಕಾರಿಗಳಾದ ಕಿರಣ ಪಾಟೀಲ್, ಹಣಮಂತರಾಯ ಕೌಟಗೆ, ಸಿಪಿಐ ರಘುವೀರಸಿಂಗ್ ಠಾಕೂರ್, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಇತರರಿದ್ದರು.
ಸಿಡಿಪಿಒ ವಿರುದ್ಧ ಆಕ್ರೋಶ: ಅಂಗನವಾಡಿ ಕೇಂದ್ರಗಳಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳು ಸಂಪೂರ್ಣ ಕಳಪೆಯಾಗಿವೆ. ಬೆಲ್ಲ ಮತ್ತು ಹಾಲಿನ ಪೌಡರ್ ಸೇವಿಸಲು ಯೋಗ್ಯವಾಗಿಲ್ಲ. ಆದರೂ ಸಿಡಿಪಿಒ ಸುಮ್ಮನಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಸಮಸ್ಯೆ ಸರಿಪಡಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ನೇಮಕಾತಿಯಲ್ಲಿ ಸಿಬ್ಬಂದಿ ಹಣ ವಸೂಲಿಗೆ ಇಳಿದಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಗಂಭೀರ ಪರಿಗಣಿಸಿ ಭ್ರಷ್ಟರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಸಮಸ್ಯೆ ಶೀಘ್ರ ಪರಿಹರಿಸಬೇಕು. ಕೆಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾಗಿ ಓದಲು, ಬರೆಯಲು ಬರುತ್ತಿಲ್ಲ. ಹೀಗಾದರೆ ಫಲಿತಾಂಶ ಸುಧಾರಣೆ ಹೇಗೆ ಸಾಧ್ಯ? ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು.
| ಪ್ರಭು ಚವ್ಹಾಣ್ ಶಾಸಕ