ಜಿಲ್ಲೆ

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಭೂಮಿಯ ಮೇಲೆ ಜೀವವೈವಿಧ್ಯದ ಉಳಿವಿಗೆ ನೈಸರ್ಗಿಕ ಸಂಪನ್ಮೂಲಗಳಾದ ನೀರು, ಗಾಳಿ ಮತ್ತು ಆಹಾರ ಅವಶ್ಯವಾಗಿದ್ದು, ಇವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಹೇಳಿದರು.

ವಿಶ್ವ ಜಲ ದಿನದ ಅಂಗವಾಗಿ ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಂಕಲ್ಪಸೌಧದ ಆವರಣದಲ್ಲಿ ನೀರು ಉಳಿಸಿ ಜಾಗೃತಿ ಹಾಗೂ ಮಹತ್ವದ ಕುರಿತು ಕಾರ್ಯಕರ್ತರಿಗೆ ಶನಿವಾರ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಆರೋಗ್ಯಕರ ಮನುಷ್ಯನ ಬದುಕಿನ ಪ್ರತಿದಿನವನ್ನು ನೀರಿಲ್ಲದೆ ಊಹಿಸಿಕೊಳ್ಳುವುದು ಅಸಾಧ್ಯ. ಮನುಷ್ಯನ ದೇಹವು ಶೇ.60ರಷ್ಟು ನೀರಿನಿಂದ ಕೂಡಿದೆ. ಇದು ದೇಹದ ತಾಪಮಾನ ನಿಯಂತ್ರಣ, ಪೋಷಕಾಂಶಗಳ ಸಾಗಣೆ ಮತ್ತು ವಿಷಕಾರಕ ಹೊರಹಾಕುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತದೆ. ಅಲ್ಲದೆ ನೀರನ್ನು ನಾವು ಕುಡಿಯಲು, ಅಡುಗೆ ಮಾಡಲು, ಸ್ವಚ್ಛಗೊಳಿಸಲು, ಸ್ನಾನ ಮಾಡಲು, ಇತರ ಗೃಹ ಬಳಕೆ ಹಾಗೂ ಮನರಂಜನೆ ಚಟುವಟಿಕೆಗಳಿಗೆ ಬಳಸುತ್ತಿದ್ದು, ನೀರಿನ ಮಿತ ಬಳಕೆ ಬಗ್ಗೆ ಎಲ್ಲರೂ ಅರಿವು ಹೊಂದಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಹಿರಿಯ ನಿರ್ದೇಶಕ ವಿ.ವಿಜಯ್ ಕುಮಾರ್ ನಾಗನಾಳ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಮಾಡುವ ಆಸೆಗೆ ಬಿದ್ದು, ಸಂಪತ್ತಿನ ಗಳಿಕೆಗಾಗಿ ಸಾಕಷ್ಟು ಪ್ರಾಮುಖ್ಯ ನೀಡುತ್ತಿದ್ದಾರೆ. ಸಂಪನ್ಮೂಲಗಳ ಸದ್ಬಳಕೆಗೆ ಮಹತ್ವ ನೀಡದಿರುವುದರಿಂದ ಭವಿಷ್ಯದ ಯುವ ಪೀಳಿಗೆಗೆ ಅಗತ್ಯವಾಗಿ ಬೇಕಾದ ಮಣ್ಣು, ನೀರು, ಗಾಳಿ, ಬೆಳಕು ಮತ್ತು ಆಹಾರ ಇತ್ಯಾದಿಗಳಿಗೆ ಸಂಕಷ್ಟ ಪಡುವ ದಿನಗಳು ದೂರ ಇಲ್ಲ. ಹೀಗಾಗಿ ನೀರಿನ ನಿರ್ವಹಣೆ ಅತಿ ಅಗತ್ಯ ಎಂದು ತಿಳಿಸಿದರು.

ಶುದ್ಧ ನೀರಿನ ಅಭಾವ ಮತ್ತು ಕಲುಷಿತ ಗುಣಮಟ್ಟದ ನೀರು ಇಂದು ನಮ್ಮ ಬದುಕಿಗೆ ಮಾರಕವಾಗಿದೆ. ವೈಜ್ಞಾನಿಕವಾಗಿ ಹೇಳುವುದಾದರೆ ನೀರಿನ ಪ್ರಮಾಣ ಮತ್ತು ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಭೂಮಿಯಲ್ಲಿ ಲಭ್ಯವಿರುವ ಶೇ.71 ನೀರಿನಲ್ಲಿ ಎಲ್ಲ ನೀರನ್ನು ನಾವು ದೈನಂದಿನ ಜೀವನದಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಕಲುಷಿತ ನೀರಿನ ಬಳಕೆಯಿಂದ ಅತಿಸಾರ ಭೇದಿ, ಟೈಫಾಯಿಡ್‌ನಂತಹ ಮಾರಕ ರೋಗಗಳನ್ನು ಹೊತ್ತು ತರುತ್ತಿದೆ. ಈ ನಿಟ್ಟಿನಲ್ಲಿ ನೀರಿನ ಮಿತ ಬಳಕೆ, ಉಳಿತಾಯ, ನೀರಿನ ಸಂರಕ್ಷಣೆ ಮತ್ತು ನೀರಿನ ಗುಣಮಟ್ಟ ಕಾಪಾಡಿಕೊಳ್ಳಬೇಕು. ಪರಿಸರ ಆರೋಗ್ಯ ಮತ್ತು ಜೀವನ ನಿರ್ವಹಣೆಗೆ ನೀರು ಅತ್ಯಗತ್ಯವಾಗಿದೆ. ಭವಿಷ್ಯದ ಪೀಳಿಗೆ ಉಳಿವಿಗೆ ಇದು ಅನಿವಾರ್ಯ ಎಂದರು.

ಯೋಜನಾಧಿಕಾರಿಯಾದ ಪಿ.ಶಶಿರೇಖಾ, ಮಾಧವ, ಮೇಲ್ವಿಚಾರಕ ಶ್ರೇಣಿಯ ಎಲ್ಲ ಸಿಬ್ಬಂದಿ ಹಾಗೂ ಕಚೇರಿ ಸಹಾಯಕ ಶ್ರೇಣಿಯ ಎಲ್ಲ ಸಿಬ್ಬಂದಿ ಭಾಗವಹಿಸಿದ್ದರು.