ಜಿಲ್ಲೆ

ನೈಸರ್ಗಿಕ ರಸಗೊಬ್ಬರದಿಂದ ಉತ್ಪಾದನೆಯಲ್ಲಿ ತೊಡಗಿ

ಕುಶಾಲನಗರ: ರೈತರು ಶೂನ್ಯ ಬಂಡವಾಳದ ಬೆಳೆಗಳ ಉತ್ಪಾದನೆಯಲ್ಲಿ ರಸಾಯನಿಕ ಬದಲಿಗೆ ನೈಸರ್ಗಿಕ ರಸಗೊಬ್ಬರ ಬಳಸಬೇಕು ಎಂದು ರಾಮನಾಥಪುರ ತಂಬಾಕು ಮಂಡಳಿ ಅಧೀಕ್ಷಕ ಐಸಾಕ್ ಸ್ವರ್ಣದತ್ ಸಲಹೆ ನೀಡಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವಾಣಿಜ್ಯ ಇಲಾಖೆ, ತಂಬಾಕು ಮಂಡಳಿ, ಹರಾಜು ಮಾರುಕಟ್ಟೆ ರಾಮನಾಥಪುರ ವತಿಯಿಂದ ಕುಶಾಲನಗರ ಸಮೀಪದ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ರೈತ ಶೇಷಪ್ಪ ಅವರ ಮನೆ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಂಬಾಕು ಬೆಳೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೂನ್ಯ ಬಂಡವಾಳ ಕೃಷಿ ಎಂದರೆ ದುಡ್ಡು ಖರ್ಚು ಮಾಡದೆ ಬೆಳೆಯುವುದು. ಬಿತ್ತನೆ ಬೀಜ, ಕೀಟನಾಶಕ ಎಂದು ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರಕ್ಕಾಗಿ ಸರದಿಯಲ್ಲಿ ಕಾದು ನಿಂತು ಹಣ ಖರ್ಚು ಮಾಡಿ ಬೆಳೆ ಬೆಳೆಯುವುದರ ಬದಲು, ಕೊಟ್ಟಿಗೆಯಲ್ಲಿನ ಸಗಣಿ, ಗಂಜಲ, ಬದುವಿನ ಮಣ್ಣು, ಬೆಲ್ಲ, ದ್ವಿದಳ ಧಾನ್ಯಗಳನ್ನು ಬಳಸಿ ಬೆಳೆಯುವುದೇ ನೈಸರ್ಗಿಕ ಕೃಷಿ ಎಂದು ತಿಳಿಸಿದರು.

ಸಗಣಿಯಲ್ಲಿ ಹೇರಳವಾದ ಜೀವಾಣು:ನೈಸರ್ಗಿಕ ಕೃಷಿಗೆ ದೇಸಿ ಆಕಳು ಅತ್ಯಗತ್ಯ. ಇದರ ಸಗಣಿಯಲ್ಲಿ ಹೇರಳವಾದ ಜೀವಾಣುಗಳಿವೆ. ಇದರ ಗಂಜಲದಲ್ಲಿ ಅನೇಕ ಪೋಷಕಾಂಶಗಳಿವೆ. ಒಂದು ಗ್ರಾಂ ಸಗಣಿಯಿಂದ ಕೋಟ್ಯಂತರ ಜೀವಾಣು ಪಡೆಯಬಹುದು. ಒಂದು ದೇಸಿ ಹಸು ದಿನವೊಂದಕ್ಕೆ ಸುಮಾರು 10 ಕೆ.ಜಿ. ಸಗಣಿ ಹಾಕುತ್ತದೆ. 30 ಎಕರೆ ಕೃಷಿ ಮಾಡಲು ಒಂದು ದನ ಸಾಕಾಗುತ್ತದೆ. ಶೂನ್ಯ ಬಂಡವಾಳಕ್ಕೆ ಏಕ ಬೆಳೆ ಬೆಳೆಯುವ ಬದಲು ಅಂತರ ಬೆಳೆಯಾಗಿ 30 ದಿನಗಳಲ್ಲಿ ಬೆಳೆಯುವ ತರಕಾರಿ ಬೆಳೆಯಬೇಕು. ಈ ಪದ್ಧತಿ ಅಳವಡಿಸಿಕೊಂಡ ರೈತರು ಯಾವುದೇ ಸಾಲಬಾಧೆ ಅನುಭವಿಸಬೇಕಾಗಿಲ್ಲ ಎಂದರು.
ಐಟಿಸಿ ಕಂಪನಿಯ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ತಂಬಾಕು ಕೃಷಿಯಲ್ಲಿ ವೈಜಾನಿಕ ಕೃಷಿ ಪದ್ಧತಿ ಅನುಸರಿಸುವ ಮೂಲಕ ಉತ್ತಮ ಗುಣಮಟ್ಟದ ತಂಬಾಕು ಉತ್ಪಾದಿಸಿ, ಆರ್ಥಿಕ ಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.